ಗೋಪುರಕ್ಕೆ ಪಂಚಲೋಹದ ಲೇಪನ
ಜಾತ್ರೆ ಸಂದರ್ಭದಲ್ಲಿ ದೇವಾಲಯದ ಮೇಲಿನ ಗೋಪುರಗಳಿಗೆ ಪಂಚಲೋಹ ಲೇಪನ ಮಾಡಲಾಗು ವುದು. ದೇವಾಲಯದ ಮೂರು ಭಾಗಗಳಲ್ಲಿನ ಗೋಪುರಗಳಿಗೆ ಪಂಚ ಲೋಹ ಸೇರಿಸಿ ಲೇಪನ ಮಾಡಲಾಗು ವುದು. ಅದರಲ್ಲಿ ಶೇ.90ರಷ್ಟು ಹಿತ್ತಾಳೆ ಇರುತ್ತದೆ. ಈಗಾಗಲೇ ಶಿವಮೊಗ್ಗದ ಹಾರನಹಳ್ಳಿಯಿಂದ ಕುಶಲ ಕರ್ಮಿಗಳು ಆಗಮಿಸಿ, ಕೆಲಸ ಮಾಡುತ್ತಿದ್ದಾರೆ. ಇನ್ನೂ 15 ದಿನಗಳಲ್ಲಿ ಈ ಕೆಲಸ ಮುಗಿಯಲಿದೆ.
-ಗೌಡ್ರ ಚನ್ನಬಸಪ್ಪ, ಧರ್ಮದರ್ಶಿ, ದೇವಸ್ಥಾನ ಟ್ರಸ್ಟ್
ದಾವಣಗೆರೆ, ಫೆ.8- ಬರುವ ಮಾರ್ಚ್ 15 ಮತ್ತು 16ರಂದು ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕ ನಾಗರಾಜ ಜೋಯಿಸ್ ಅವರಿಂದ ಹಂದರ ಕಂಬದ ಪೂಜೆಯನ್ನು ಸಾಂಪ್ರದಾಯಿಕವಾಗಿ ಇಂದು ನೆರವೇರಿಸಲಾಯಿತು. ಈ ಮೂಲಕ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಹಂದರ ಕಂಬ ಪೂಜೆ ಪ್ರಯುಕ್ತ ದೇವಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿ ದವು. ನಂತರ ಹಂದರ ಕಂಬದ ಪೂಜೆಯಲ್ಲಿ ಗುಣಿಯಲ್ಲಿ ಹಾಲು-ತುಪ್ಪ, ಮುತ್ತು-ಹವಳ, ಪಂಚಲೋಹ ಮತ್ತು ದಕ್ಷಿಣೆ ಹಾಕಿ ಹಂದರ ಕಂಬವನ್ನು ನಿಲ್ಲಿಸಲಾಯಿತು. ಈ ವೇಳೆ ಭಕ್ತರು ಉದೋ, ಉದೋ, ಹುಲಿಗ್ಯೋ ಎಂದು ಕೂಗುವ ಮೂಲಕ ಹಂದರ ಕಂಬವನ್ನು ಮುಟ್ಟಿ ಪುನೀತರಾದರು. ಪೂಜಾ ಕಾರ್ಯದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಈ ವೇಳೆ ಎಸ್ಸೆಸ್ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೀಗ ಕೊರೊನಾ ಆರ್ಭಟ ತಗ್ಗುತ್ತಿದೆ. ಆದರೂ ಸರ್ಕಾರದ ಮಾರ್ಗ ಸೂಚಿ ಯಂತೆ ಅಂತರ ಕಾಯ್ದುಕೊಂಡು ಜಾತ್ರಾ ಮಹೋತ್ಸವ ನೆರವೇರಿಸಲಾಗುವುದು. ಸರಳ ವಾಗಿ ಜಾತ್ರೆ ಆಚರಿಸುವ ಕಾರಣ ದೇವಸ್ಥಾನದ ಎದುರು ಜಾತ್ರೆಗೆಂದು ಪ್ರತಿ ಬಾರಿ ನಿರ್ಮಿ ಸುತ್ತಿದ್ದ ಮಹಾಮಂಟಪವನ್ನು ಈ ಬಾರಿ ನಿರ್ಮಿ ಸುವುದಿಲ್ಲ. ಸಾಧಾರಣ ಪೆಂಡಾಲ್ ಹಾಕಿ ಜಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ಜಾತ್ರೆಯ ಪ್ರಯುಕ್ತ ಇಡೀ ಊರು ಸಂಚರಿಸುವ ಎರಡು ಡಬ್ಬಿಗಡಿಗೆಗೂ ಚಾಲನೆ ನೀಡಲಾಗಿದ್ದು, ಭಕ್ತರು ತನು, ಮನ, ಧನ ಅರ್ಪಿಸಿ ಜಾತ್ರೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಬೇಕು ಎಂದು ಎಸ್ಸೆಸ್ ಕರೆ ನೀಡಿದರು.
ಉದ್ಯಮಿ ಎಸ್.ಎಸ್. ಗಣೇಶ್, ಶ್ರೀಮತಿ ರೇಖಾ ಗಣೇಶ್, ಶ್ರೀಮತಿ ಪ್ರಭಾ ಮಲ್ಲಿ ಕಾರ್ಜುನ್, ದೂಡಾ ಅಧ್ಯಕ್ಷ ದೇವರ ಮನೆ ಶಿವಕುಮಾರ್, ಮಾಲತೇಶ ರಾವ್ ಜಾಧವ್, ಯಶವಂತರಾವ್ ಜಾಧವ್, ಜೆ.ಕೆ. ಕೊಟ್ರ ಬಸಪ್ಪ, ಎಲ್.ಎಂ. ಹನುಮಂತಪ್ಪ, ಬಿ.ಹೆಚ್. ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳಿ ಪಾದುಕೆ : ಕೋವಿಡ್ ಹಿನ್ನೆಲೆಯಲ್ಲಿ ಇದೇ ದಿನಾಂಕ 15 ಮತ್ತು 28ರಂದು ಸರ್ಕಾರ ಮಾರ್ಗಸೂಚಿ ಹೊರಡಿಸಲಿದ್ದು, ಈ ಮಾರ್ಗಸೂಚಿಯನ್ವಯ ಸಾಂಸ್ಕೃತಿಕ ಕಾರ್ಯಕ್ರಮ, ಕುರಿ ಕಾಳಗ, ಕುಸ್ತಿ ಪಂದ್ಯಾವಳಿ ಆಯೋಜನೆ ಬಗ್ಗೆ ತೀರ್ಮಾನಿಸಲಾಗುವುದು. ಜಾತ್ರೆಯ ವೇಳೆ ಅಂತರ ಕಾಯ್ದುಕೊಂಡು ದೇವಿಯ ದರ್ಶನ ಪಡೆಯಲು ಸಾಲಿನ ವ್ಯವಸ್ಥೆ ಮಾಡಲಾಗುವುದು. ಉರುಳು ಸೇವೆ ನಡೆಸುವ ಭಕ್ತರಿಗಾಗಿ ದೇವಸ್ಥಾನದ ಆವರಣದಲ್ಲಿ ಮರಳು ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ದೇವಾಲಯದ ಮುಂಭಾಗದಲ್ಲಿನ ದೇವಿಯ ಪಾದುಕೆಯ ಮೇಲೆ ಭಕ್ತರೊಬ್ಬರು ಬೆಳ್ಳಿಯ ಪಾದುಕೆ ಮಾಡಿಸಿದ್ದಾರೆ. ಇದು ಈ ಬಾರಿಯ ವಿಶೇಷಗಳೊಂದಾಗಿದೆ. ಈಗಾಗಲೇ ಈ ಬೆಳ್ಳಿ ಪಾದುಕೆಯನ್ನು ಅಲ್ಲಿ ಹಾಕಲಾಗಿದೆ ಎಂದು ಚನ್ನಬಸಪ್ಪ ಅವರು ಪತ್ರಕರ್ತರನ್ನು ಸ್ಥಳಕ್ಕೆ ಕರೆದೊಯ್ದು ತೋರಿಸಿದರು.