ಸುಳ್ಳು ವದಂತಿಗಳಿಗೆ ಕಿವಿಗೊಡದಿರಲು ಎಸ್ಸೆಸ್ ಮನವಿ

ಸುಳ್ಳು ವದಂತಿಗಳಿಗೆ ಕಿವಿಗೊಡದಿರಲು ಎಸ್ಸೆಸ್ ಮನವಿ - Janathavaniದಾವಣಗೆರೆ, ಫೆ.8- ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಇಂತಹ ಸುಳ್ಳು ವದಂತಿಗಳಿಗೆ ನಾಗರಿಕರು ಕಿವಿಗೊಡದಂತೆ ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರು ಮನವಿ ಮಾಡಿದ್ದಾರೆ.

ನಗರದಲ್ಲಿ ಇಂದು ಯಾವುದೇ ಘಟನೆಗಳಾಗಿಲ್ಲ. ಕೆಲವು ಕಿಡಿಗೇಡಿ ಗಳಿಂದ ಸುಳ್ಳು ವದಂತಿ ಹಬ್ಬಿ, ರಾಜ್ಯದ ಮೂಲೆ – ಮೂಲೆಗಳಿಂದ ನಮ್ಮನ್ನು ಹಲವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ನಾವೂ ಸಹ ದಾವಣ ಗೆರೆಯಲ್ಲಿ ಯಾವುದೇ ಘಟನೆಗಳಾಗಿಲ್ಲ, ಆದರೂ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆಗಳು ಆಗದಂತೆ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಈಗಾಗಲೇ ಕೊರೊನಾ ಮತ್ತಿತರೆ ಕಾರಣಗಳಿಂದ ವ್ಯಾಪಾರ – ವಹಿವಾಟುಗಳಿಗೆ ಧಕ್ಕೆ ಆಗಿ ಜೀವನ ನಡೆಸುವುದೇ ದುಸ್ತರವಾಗಿದೆ. ಇದೀಗ ಇಂತಹ ಘಟನೆಗಳಿಂದ ಮತ್ತಷ್ಟು ಸಂಕಷ್ಟವನ್ನು ದಾವಣಗೆರೆ ಜನತೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಸುಳ್ಳು ವದಂತಿಗಳನ್ನು ಹಬ್ಬಿಸಿ ನಗರದಲ್ಲಿ ಅಶಾಂತಿ ಮೂಡಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಸೂಚಿಸಿದ್ದಾರೆ.

error: Content is protected !!