ಲತಾ ಕಂಠದ ಹಾಡುಗಳು ಎಂದಿಗೂ ಅಜರಾಮರ : ಬಸವಪ್ರಭು ಶ್ರೀ

ಲತಾ ಮಂಗೇಶ್ಕರ್, ಇಬ್ರಾಹಿಂ ಸುತಾರಾ ನಿಧನಕ್ಕೆ ಶ್ರದ್ಧಾಂಜಲಿ 2 ನಿಮಿಷ ಮೌನಾಚರಿಸಿ, ಶ್ರದ್ಧಾಂಜಲಿ

ದಾವಣಗೆರೆ, ಫೆ.6- ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ನಮ್ಮಿಂದ ಅಗಲಿದರೂ, ಅವರ ಕೋಗಿಲೆ ಕಂಠದ ಹಾಡುಗಳು ಎಂದಿಗೂ ಅಜರಾಮರ ಎಂದು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮುಕ್ತಕಂಠದಿಂದ ಪ್ರಶಂಶಿಸಿದರು.

ಅವರು ಇಂದು  ನಗರದ ಜಯದೇವ ವೃತ್ತದಲ್ಲಿ ಮೌಲಾನಾ ಆಜಾದ್ ಸಂಸ್ಥೆ ವತಿಯಿಂದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಹಾಗೂ ಸೂಫಿ ಸಂತ ಇಬ್ರಾಹಿಂ ಸುತಾರಾ ಅವರ ನಿಧನದ ಹಿನ್ನೆಲೆಯಲ್ಲಿ ಏರ್ಪಾಡಾಗಿದ್ದ ಶ್ರದ್ಧಾಂಜಲಿ ಸಭೆಯ ಸಾನ್ನಿಧ್ಯ ವಹಿಸಿ, ಶ್ರೀಗಳು ಮಾತನಾಡಿದರು.

ಲತಾ ಅವರು ಇಡೀ ವಿಶ್ವದಲ್ಲೇ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿ ದ್ದರು. ಅವರ ಎಲ್ಲಾ ಹಾಡುಗಳು ಹೃದಯಕ್ಕೆ ಹತ್ತಿರವಾಗುತ್ತಿದ್ದವು. ಮಹಾತ್ಮ ಗಾಂಧಿ ಅವರು ಈ ರಾಷ್ಟ್ರಕ್ಕೆ ಹೇಗೆ ರಾಷ್ಟ್ರಪಿತರಾಗಿ ದ್ದಾರೆಯೋ ಹಾಗೆಯೇ ಲತಾ ಅವರು ರಾಷ್ಟ್ರದ ತಾಯಿ ಆಗಿದ್ದಾರೆ ಎಂದು ತಿಳಿಸಿದರು.

ಅವರ ಹಾಡುಗಳನ್ನು ಕೇಳಿಕೊಂಡು ನಾವು ಬೆಳೆದಿದ್ದೇವೆ. `ಏ ಮೇರೆ ವತನ್ ಕೆ ಲೋಗೊ’ ಸೇರಿದಂತೆ ಅವರ ಎಲ್ಲಾ ಹಾಡುಗಳನ್ನು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಪ್ರೀತಿಸುತ್ತಿದ್ದಾರೆ. ಅವರ ಹಾಡುಗಳು ಸೂರ್ಯ, ಚಂದ್ರ ಇರು ವವರೆಗೂ ಜೀವಂತ ಎಂದು ತಿಳಿಸಿದರು.

ಕಳೆದ ಸೆಪ್ಟೆಂಬರ್ 1ರಂದು ಲತಾ ಮಂಗೇಶ್ಕರ್ ಅವರ ಜನ್ಮದಿನವನ್ನು ವಿರಕ್ತಮಠದಲ್ಲಿ ಮಕ್ಕಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿ.ಆರ್. ನಸೀರ್ ಅಹಮ್ಮದ್ ಅವರು ಫೋನ್ ಮೂಲಕ ಲತಾ ಅವರನ್ನು ಸಂಪರ್ಕಿಸಿದ್ದರು. ಆಗ ಲತಾ ಅವರು ಮಕ್ಕಳು ಮತ್ತು ನನ್ನೊಂದಿಗೆ ಮಾತನಾಡಿದ್ದರು. ಮಠದಲ್ಲಿ ತನ್ನ ಜನ್ಮ ದಿನ ಆಚರಣೆ ಮಾಡುತ್ತಿರುವ ವಿಚಾರ ಕೇಳಿ ಸಂತೋಷಪಟ್ಟರು ಎಂದು ಅಭಿಮಾನದಿಂದ ಹೇಳಿಕೊಂಡರು.

ಅಂದು ಲತಾ ಮಂಗೇಶ್ಕರ್‌ ಅವರು ಮಾತನಾಡಿದ್ದು ಕೇಳಿದಾಗ ಕೋಗಿಲೆಯ ಕಂಠದಲ್ಲಿ ಮಾತನಾಡಿದಂತೆ ಭಾಸವಾಯಿತು. ಅವರ ಮೃದು ಮಾತುಗಳು ತಾಯಿಯ ಮಮತೆಯನ್ನು ನೆನಪಿಸಿತು. ಅವರೊಂದಿಗೆ ಮಾತನಾಡಿದ್ದು ನನ್ನ ಭಾಗ್ಯ. ಲತಾ ಮಂಗೇಶ್ಕರ್ ಅವರನ್ನು ಈ ದೇಶ ಅಷ್ಟೇ ಏಕೆ, ಪ್ರಪಂಚದಲ್ಲಿನ ಸಂಗೀತ ಪ್ರಿಯರು ಮೆಚ್ಚುತ್ತಾರೆ. ಅವರು ಓರ್ವ ಜಾತ್ಯತೀತ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ಮುಸ್ಲಿಂ ಸಮಾಜದ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, ಲತಾ ಮಂಗೇಶ್ಕರ್ ಹಾಗೂ ಸಂತ ಇಬ್ರಾಹಿಂ ಸುತಾರಾ ಅವರು ನಮ್ಮನ್ನು ಅಗಲಿದ್ದರೂ ಸಹ ಅವರ ಹಾಡುಗಳು, ತತ್ತ್ವಾದರ್ಶಗಳು ಅವರ ಪ್ರವಚನಗಳು ಎಂದಿಗೂ ನಮ್ಮೊಂದಿಗೆ ಇರು ತ್ತವೆ. ಅವರು ಎಂದೆಂದಿಗೂ ಅಮರರು ಎಂದರು.

ಈ ವೇಳೆ ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ಉದ್ಯಮಿ ಎಸ್.ಟಿ. ಕುಸುಮ ಶ್ರೇಷ್ಠಿ, ಪತ್ರಕರ್ತ ಸಿ.ಪಿ. ಸತೀಶ್ ಕುಮಾರ್, ವಾಣಿ ಸತೀಶ್ ಕುಮಾರ್, ಲಂಬಿ ಮುರು ಗೇಶ್, ಆರ್. ಪ್ರಸಾದ್, ರಘು ಬಾಯ್ ಪಟೇಲ್, ಶಿವನಗೌಡ ಪಾಟೀಲ್, ಷಾ ನವಾಜ್ ಖಾನ್, ಕನ್ನಡಪರ ಸಂಘಟನೆಗಳ ಮುಖಂಡರಾದ ಕೆ.ಜಿ. ಶಿವಕುಮಾರ್, ಕೆ.ಜಿ. ಯಲ್ಲಪ್ಪ, ಎಸ್.ಟಿ. ಸೋಮಶೇಖರ್ ಸೇರಿದಂತೆ ಇತರರು ಇದ್ದರು.

error: Content is protected !!