ಸಿಎಂಗೆ ಪತ್ರ ಬರೆದ ಕಸಾಪ ಅಧ್ಯಕ್ಷ ವಾಮದೇವಪ್ಪ
ದಾವಣಗೆರೆ, ಫೆ.4- ರಾಜ್ಯ ಸರ್ಕಾರವು ಸದ್ಯದಲ್ಲೇ ಮಂಡಿಸಲಿರುವ 2022-23 ರ ಸಾಲಿನ ಆಯವ್ಯಯದಲ್ಲಿ ನಾಡಿನ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ `ಕನ್ನಡ ಭವನ’ ನಿರ್ಮಿಸಲು ಜಿಲ್ಲಾ ಕೇಂದ್ರಗಳಿಗೆ ತಲಾ ಒಂದು ಕೋಟಿ ರೂಪಾಯಿ ಮತ್ತು ತಾಲ್ಲೂಕು ಕೇಂದ್ರಗಳಿಗೆ ತಲಾ 50 ಲಕ್ಷ ರೂ.ಮೀಸಲಾಗಿರಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಾಮದೇವಪ್ಪ ಅವರು, ಕೇಂದ್ರ ಸಾಹಿತ್ಯ ಪರಿಷತ್ತಿನ ಮಾದರಿಯಲ್ಲಿಯೇ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕನ್ನಡ ನಾಡು ನುಡಿಯ ಪರವಾಗಿ ಕೆಲಸ ನಿರ್ವಹಿಸಿ ಜನ ಮನ್ನಣೆ ಗಳಿಸಿವೆ. ಆದರೆ 107 ವರ್ಷಗಳ ತರುವಾಯವೂ ಬಹುತೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅವುಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸ್ವಂತ ಕಟ್ಟಡವನ್ನು ಹೊಂದಿಲ್ಲದಿರುವುದು ವಿಷಾದದ ಸಂಗತಿ. ಆದ್ದರಿಂದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕನ್ನಡ ಭವನಗಳಿಲ್ಲದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸಲು ಸೂಕ್ತ ಸ್ಥಳವನ್ನು ಮಂಜೂರು ಮಾಡುವುದರ ಜೊತೆಗೆ ಅನುದಾನ ನೀಡುವ ಯೋಜನೆಯನ್ನು ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.
ತನ್ನದೇ ಆದ ಸ್ವಂತ ಕಟ್ಟಡಗಳು ಇದ್ದಾಗ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ನುಡಿ, ಕಲೆ, ಕಲಾವಿದರಿಗೆ, ಸಾಹಿತಿಗಳಿಗೆ, ವಾಗ್ಮಿಗಳಿಗೆ ಸೂಕ್ತವಾದ ಅವಕಾಶವನ್ನು ನೀಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳಿಗೆ ಕಳುಹಿಸಿರುವ ಪತ್ರದ ಪ್ರತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿಯವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಕಳುಹಿಸಿ, ಅವರುಗಳೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಯೋಜನೆ ಕಾರ್ಯರೂಪಕ್ಕೆ ಬರಲು ಸಹಕರಿಸುವಂತೆಯೂ ಕೋರಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.