ಹರಪನಹಳ್ಳಿ, ಫೆ.3- ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಸಂದರ್ಭದಲ್ಲಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆ ಯಾಗಬಹುದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಬಾಬು ಜಗ ಜೀವನ್ರಾಮ್ ಸಮುದಾಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳಿಂದ ಆಯ್ಕೆಯಾದ 31 ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿ ಪಂಪ್, ಮೋಟರ್ ಸೇರಿದಂತೆ ಇತರೆ ಪೂರಕ ಸಾಮಗ್ರಿಗಳನ್ನು ವಿತರಿಸಿ, ವಿವಿಧ ಕಾಮಗಾರಿ ಗಳಿಗೆ ಭೂಮಿ ಪೂಜೆ ನೆರವೇ ರಿಸಿ ಅವರು ಮಾತನಾಡಿದರು.
ಪಟ್ಟಣದ ಹಿರೇಕೆರೆಯನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಈಗಾಗಲೇ ಕ್ರಿಯಾ ಯೋಜನೆ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕುರಿತು ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ನಾವು ಸಚಿವನಾಗಿದ್ದಾಗ ತಾಲ್ಲೂಕಿನ 60 ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 50 ಕೆರೆಗಳಿಗೆ ಮಾತ್ರ ಸೀಮಿತಗೊಳಿಸಿ, 10 ಕೆರೆಗಳನ್ನು ಕೈಬಿಡಲಾಗಿತ್ತು. ಈ ಬಗ್ಗೆ ಕೆಲ ರೈತರು ನಮ್ಮ ಕೆರೆಗಳಿಗೂ ನೀರು ತುಂಬಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ 10 ಕೆರೆಗಳಿಗೂ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದರು.
ರಾಗಿ ಖರೀದಿ ಕೇಂದ್ರ ಆರಂಭಿಸಲು ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಬಳಿ ಚರ್ಚಿಸಿದ್ದು ಶೀಘ್ರ ಆರಂಭಿಸಲಾಗುವುದು ಎಂದರು.
ಹರಪನಹಳ್ಳಿ ಪಟ್ಟಣದಲ್ಲಿ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಹಿರೇಕೆರೆಯಲ್ಲಿ ನದಿ ನೀರು ಸಂಗ್ರಹಿಸಿ ಕ್ರಮ ವಹಿಸಲು ಚಿಂತನೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕಂಚಿಕೇರಿ ಮುಖ್ಯ ರಸ್ತೆಯಿಂದ ಹಳ್ಳಿಕೇರಿ ಗ್ರಾಮಕ್ಕೆ ಹೋಗುವ ರಸ್ತೆಗೆ ಭೂಮಿ ಪೂಜೆ, ಕಂಚಿಕೇರಿ ಮುಖ್ಯ ರಸ್ತೆಯಿಂದ ರಂಗಾಪುರ- ಹಲವಾಗಲು ಗ್ರಾಮಕ್ಕೆ ಹೋಗುವ ರಸ್ತೆ ಭೂಮಿ ಪೂಜೆ. ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ದೇವಸ್ಥಾನದಿಂದ ಕೆಸರಳ್ಳಿಗೆ ಹೋಗುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ.ಘಟಕದ ಕಾರ್ಯದರ್ಶಿ ಆರ್.ಲೋಕೇಶ್, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಎಸ್.ಪಿ.ಲಿಂಬ್ಯಾನಾಯ್ಕ, ಮುಖಂಡರಾದ ಎಂ.ಪಿ.ನಾಯ್ಕ, ಮಲ್ಲೇಶ್, ಭಂಗಿ ಚಂದ್ರಪ್ಪ, ಯುಪಿ ನಾಗರಾಜ, ರಾಘವೇಂದ್ರ ಶೆಟ್ಟಿ, ಮಂಜ್ಯಾನಾಯ್ಕ, ರಂಗಾಪುರ ಪಕ್ಕೀರಪ್ಪ, ಡಿವೈಎಸ್ಪಿ ಹಾಲಮೂರ್ತಿರಾವ್, ಅರುಣಕುಮಾರ, ಮಂಜುಳಾ ಸೇರಿದಂತೆ, ಇತರರು ಇದ್ದರು.