ಉಡುಗೊರೆಯ ನೋಟ್ ಪುಸ್ತಕ ಮಕ್ಕಳಿಗೆ ಸಮರ್ಪಿಸಿದ ಮೇಯರ್

ದಾವಣಗೆರೆ, ಫೆ.2- ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅವರು ತಮಗೆ ಉಡುಗೊರೆಯಾಗಿ ಬಂದಿದ್ದ ನೋಟ್ ಪುಸ್ತಕಗಳ ಸದ್ಬಳಕೆಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಅವುಗಳನ್ನು ಸಮರ್ಪಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ. ಆ ಮುಖೇನ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಯ ಹಂಬಲ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶ್ರೀರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರುವರೆ ಸಾವಿರ ನೋಟ್ ಪುಸ್ತಕಗಳು ಮತ್ತು ಪೆನ್ನುಗಳನ್ನು ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಶಿಕ್ಷಣವೊಂದಿದ್ದರೆ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುವುದರ ಜೊತೆಗೆ ದೇಶದ ಪ್ರಗತಿ ಸಾಧ್ಯ ಎಂಬುವುದರಲ್ಲಿ ನಂಬಿಕೆ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಬಡತನದಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಕಲ್ಪನೆ ಬಂದಿತು ಎಂದು ಮೇಯರ್ ವೀರೇಶ್ ಅವರು ತಮ್ಮ ಹಂಬಲವನ್ನು ಅಭಿವ್ಯಕ್ತಪಡಿಸಿದರು.

ನಗರ ಪಾಲಿಕೆ ಮಹಾಪೌರನಾದ ದಿನ ನನಗೆ ನಾಗರಿಕರು, ಸ್ನೇಹಿತರು, ಹಿತೈಷಿಗಳು ಅಭಿನಂದನೆ ಸಲ್ಲಿಸಲು ಹಾರ-ಪೇಟೆ ತರುತ್ತಿದ್ದರು. ಇದರಿಂದ
ಏನು ಉಪಯೋಗವಿಲ್ಲ ಎಂದು ಮನಗೊಂಡು
ಹಾರ-ಪೇಟ ತರಬೇಡಿ, ಅದರ ಬದಲು ನೋಟ್ ಪುಸ್ತಕ ಕೊಡಿ ಎಂಬ ಮನವಿ ಮಾಡಲಾಯಿತು. ಅದು ನನ್ನ ನಿರೀಕ್ಷೆಗೂ ಮೀರಿ ನೋಟ್ ಪುಸ್ತಕಗಳನ್ನು ನಾಗರಿಕರು, ಸ್ನೇಹಿತರು, ನನ್ನ ವಿದ್ಯಾರ್ಥಿ ದೆಸೆಯ ಸಹಪಾಠಿಗಳು ಇಲ್ಲಿಯವರಿಗೆ ಸುಮಾರು ಮೂರೂವರೆ ಸಾವಿರ
ನೋಟ್ ಪುಸ್ತಕಗಳನ್ನು ನನಗೆ ನೀಡಿದ್ದಾರೆ.
ಅದರೊಂದಿಗೆ ನಾನು ವೈಯಕ್ತಿಕವಾಗಿ ಮೂರು ಸಾವಿರ ಒಟ್ಟು ಆರೂವರೆ ಸಾವಿರ ನೋಟ್ ಪುಸ್ತಕಗಳನ್ನು ನಗರ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂದಿನಿಂದ ತಲುಪಿಸುವ ಕೆಲಸ ಪ್ರಾರಂಭಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಪಾಲಿಕೆಯ ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಅವರುಗಳು ಮಾತನಾಡಿ, ಮೇಯರ್ ವೀರೇಶ್ ಅವರು  ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿ ನಿಂತಿದೆ ಎಂದರು.

ಪಾಲಿಕೆ ಸದಸ್ಯರಾದ ಗೀತಾ ನಾಗರಾಜ್, ಜಯಮ್ಮ ಗೋಪಿನಾಯ್ಕ, ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಏಕಾಂತಪ್ಪ, ಮುಖಂಡರಾದ ಗೋಪಿನಾಯ್ಕ, ರಮೇಶ್, ಸಿದ್ದಣ್ಣ ಮತ್ತಿತರರಿದ್ದರು.

ದೀಕ್ಷಿತಾ, ಮಹಾಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಶಾಲೆಯ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಸ್ವಾಗತಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!