ಪ್ರಾಮಾಣಿಕ ಸೇವೆ ದೇಶಕ್ಕೆ ನೀಡುವ ಕೊಡುಗೆ

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ

ದಾವಣಗೆರೆ, ಜ. 28- ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ, ಬಲಿದಾನ ಮಾಡಿದ ಹಿರಿಯರ ಸೇವೆಯನ್ನು ಸ್ಮರಿಸುತ್ತಾ, ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಲು ಆದ್ಯತೆ ನೀಡಬೇಕು. ಅದೇ ದೇಶಕ್ಕೆ ನೀಡುವ ಕೊಡುಗೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಸಲಹೆ ನೀಡಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯ ದೇಶವನ್ನಾಗಿ ನಿರ್ಮಿಸುವ ಮೂಲಕ ಜಗತ್ತಿಗೆ ಮಾದರಿಯಾಗುವಂತೆ ಮಾಡಲಾಗಿದೆ ಎಂದು ಹೇಳಿದರು.

ಪ್ರಜೆಗಳೇ, ಪ್ರಜೆಗಳಿಂದ ಪ್ರಜೆಗಳಿಗಾಗಿ ಆಡಳಿತ ನಡೆಸುತ್ತಿರುವ ಭಾರತದಲ್ಲಿ ಸಾಮಾನ್ಯ ವ್ಯಕ್ತಿಯೂ ದೇಶದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವಂತೆ ಮಾಡಿದೆ. ಇದೇ ಸ್ವತಂತ್ರ ಭಾರತದ ಸೌಂದರ್ಯ. ಇದನ್ನು ಉಳಿಸಿ, ಮುಂದುವರೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್.ಎಸ್. ಅನಿತಾ, ಡೀನ್ ಪ್ರೊ. ರಾಮಲಿಂಗಪ್ಪ, ಪ್ರೊ. ಕೆ.ವೆಂಕಟೇಶ್ ಭಾಗವಹಿಸಿದ್ದರು.

error: Content is protected !!