ಕುಂಬಳೂರು ಸೇವಾ ಸಿಂಧು ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಜಯಂತ್ ಪೂಜಾರ್
ಮಲೇಬೆನ್ನೂರು, ಜ. 28- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ 4 ಸಾವಿರ ಮತ್ತು ದಾವಣಗೆರೆ ಜಿಲ್ಲೆಯಲ್ಲಿ 248 ಸೇವಾ ಸಿಂಧು ಕೇಂದ್ರಗಳು ಹಂತ ಹಂತವಾಗಿ ಕಾರ್ಯಾರಂಭ ಮಾಡಲಿವೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರ್ ಹೇಳಿದರು.
ಕುಂಬಳೂರು ಗ್ರಾಮದ ಅನುಪಮ ಹೋಟೆಲ್ನ ಮೇಲ್ಭಾಗದ ಕೊಠಡಿಯಲ್ಲಿ ಹರಿಹರ ತಾಲ್ಲೂಕಿನ ಪ್ರಥಮ ಸೇವಾ ಸಿಂಧು ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನ ಸಾಮಾನ್ಯರಿಗೆ ಉಪಯುಕ್ತ ಸೇವೆಯನ್ನು ಅತ್ಯಂತ ಕಡಿಮೆ ಸೇವಾ ಶುಲ್ಕದಲ್ಲಿ ಒದಗಿಸುವ ಉದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಸೇವಾ ಸಿಂಧು ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 4 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗಿದ್ದು, ಇ-ಶ್ರಮ ಕಾರ್ಡ್, ಆಧಾರ್ ತಿದ್ದುಪಡಿ ಸೇರಿದಂತೆ ತಾ.ಪಂ., ಕಂದಾಯ ಮತ್ತು ಕೃಷಿ ಇಲಾಖೆಗೆ ಸೌಲಭ್ಯ ಕೋರಿ ನೀವು ಅರ್ಜಿಗಳನ್ನು ನಮ್ಮ ಸೇವಾ ಸಿಂಧು ಕೇಂದ್ರದಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದು.
ಹರಿಹರ ಯೋಜನಾ ವ್ಯಾಪ್ತಿಯಲ್ಲಿ 38 ಮತ್ತು ಮಲೇಬೆನ್ನೂರು ಯೋಜನಾ ವ್ಯಾಪ್ತಿಯಲ್ಲಿ 28 ಸೇವಾ ಸಿಂಧು ಕೇಂದ್ರಗಳು ಇಂದಿನಿಂದ ಕಾರ್ಯನಿರ್ವಹಿಸಲಿವೆ ಎಂದು ಜಯಂತ್ ಪೂಜಾರ್ ತಿಳಿಸಿದರು.
ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ನಮ್ಮ ಯೋಜನಾ ವ್ಯಾಪ್ತಿ ಯಲ್ಲಿ ಇದು ಪ್ರಥಮ ಸೇವಾ ಸಿಂಧು ಕೇಂದ್ರವಾಗಿದ್ದು, ಈ ದಿನ ಜಿಗಳಿ, ಯಲವಟ್ಟಿ ಮತ್ತಿತರೆ ಗ್ರಾಮಗಳಲ್ಲೂ ಈ ಕೇಂದ್ರಗಳು ಪ್ರಾರಂಭವಾಗಲಿವೆ ಎಂದರು.
ಕುಂಬಳೂರು ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಲೀಲಾ ಶಿವಕುಮಾರ್ ಅವರು ಸೇವಾ ಸಿಂಧು ಕೇಂದ್ರಗಳ ತಾಲ್ಲೂಕು ಮಟ್ಟದ ಅಧಿಕಾರಿ ಮಂಜುನಾಥ್, ಜ್ಞಾನ ವಿಕಾಸ ಮೇಲ್ವಿಚಾರಕಿ ರಕ್ಷಿತಾ, ತಾಲ್ಲೂಕು ಅಂತರಿಕ ಲೆಕ್ಕ ಪರಿಶೋಧಕ ಚಿದಂಬರ್, ಸಹಾಯಕ ವ್ಯವಸ್ಥಾಪಕ ರಾಕೇಶ್, ವಲಯ ಮೇಲ್ವಿಚಾರಕಿ ಪದ್ಮಾವತಿ, ಸೇವಾ ಪ್ರತಿನಿಧಿ ರೇಖಾ, ಸೇವಾ ಸಿಂಧು ಕೇಂದ್ರದ ಅನುಪಮ ಹೋಟೆಲ್ ಮಾಲೀಕ ಶ್ರೀನಿವಾಸ್, ಕಾವ್ಯ ಮತ್ತಿತರರು ಈ ವೇಳೆ ಹಾಜರಿದ್ದರು.