ಸೋಮವಾರ ಲೆಕ್ಕಪತ್ರ ಮಂಡನೆ
ದಾವಣಗೆರೆ, ಜ. 27- ಸಭೆ ಆರಂಭದಲ್ಲಿ ಯಶವಂತರಾವ್ ಜಾಧವ್ ಅವರು ದೇವಸ್ಥಾನ ಸಮಿತಿಗೆ ಸಂಬಂಧಿಸಿದ ಜಾಲಿನಗರದ ದುರ್ಗಾಂಬಿಕ ಶಾಲೆ ಬಳಿಯ 32 ಮಳಿಗೆಗಳ ನಿರ್ಮಾಣದ ಗುಣಮಟ್ಟ ಪರೀಕ್ಷೆ ಹಾಗೂ ವ್ಯತ್ಯಾಸವಾಗಿರುವ ಲೆಕ್ಕಪತ್ರ ಮಂಡನೆಯನ್ನು ಸಭೆಯ ಮುಂದಿಡುವಂತೆ ಅಧ್ಯಕ್ಷ ಶಿವಶಂಕರಪ್ಪ ಅವರಲ್ಲಿ ಮನವಿ ಮಾಡಿದರು.
ಮಾತಿನ ವಾಗ್ವಾದ ನಡೆದ ನಂತರ ಪ್ರತಿಕ್ರಿಯಿಸಿದ ಎಸ್ಸೆಸ್, ಲೆಕ್ಕಪತ್ರ ಮತ್ತು ಗುಣಮಟ್ಟದ ಪರೀಕ್ಷೆ ಬಗ್ಗೆ ವರದಿ ಸಿದ್ದವಿದೆ. ಯಾವಾಗ ಬೇಕಾಗದರೂ ನೋಡಬಹುದು ಎಂದರು. ಈ ವೇಳೆ ಸ್ವಲ್ಪ ಗೊಂದಲ ಉಂಟಾಯಿತಾದರೂ, ಸಭೆ ತೀರ್ಮಾನದಂತೆ ಸೋಮವಾರ (ಜ.31) ಗುಣಮಟ್ಟ ಪರೀಕ್ಷೆ ಮತ್ತು ಲೆಕ್ಕಪತ್ರ ಮಂಡನೆಗೆ ದಿನಾಂಕ ನಿಗದಿ ಮಾಡಲಾಯಿತು.
ಸಾಂಪ್ರದಾಯಿಕ ಕುಸ್ತಿ, ಕುರಿ ಕಾಳಗ ಇರಲಿ
ದಾವಣಗೆರೆ, ಜ.27- ಬಹಳ ವರ್ಷಗಳಿಂದ ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದುಕೊಂಡು ಬಂದಿರುವ ಕುಸ್ತಿ ಪಂದ್ಯಾವಳಿ ಮತ್ತು ಕುರಿ ಕಾಳಗವನ್ನು ಈ ಬಾರಿಯೂ ಸಹ ಹಮ್ಮಿಕೊಳ್ಳುವಂತೆ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಅನೇಕರ ಅನಿಸಿಕೆಯಾಗಿತ್ತು.
ದಾವಣಗೆರೆ, ಜ.27- ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಗುರುವಾರ ನಡೆದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 15 ಮತ್ತು 16 ರಂದು ಜಾತ್ರೆ ನಡೆಸುವ ಬಗ್ಗೆ ದಿನಾಂಕ ನಿಗದಿ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪುರೋಹಿತ ನಾಗರಾಜ್ ಜೋಯಿಸ್ ಮಾತನಾಡಿ, 8 ರಂದು ಹಂದರ ಕಂಬ ಪೂಜೆ ಹಾಗೂ ಡಬ್ಬಿ ಗಡಿಗಿ ಹೊರಡಿಸಲಾಗುವುದು, ಮಾ.13 ರಂದು ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ, ಸಾರು ಹಾಕುವ ಸಂಪ್ರದಾಯ ನಡೆಯಲಿದೆ. ಮಾ. 14 ಮತ್ತು 15 ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಮಾ. 16 ರಂದು ಚರಗ ಚೆಲ್ಲುವ ಶಾಸ್ತ್ರ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಕೋವಿಡ್ ನಿಯಮಾವಳಿ ಪ್ರಕಾರ ಯಾವ ರೀತಿ ಹಬ್ಬ ಆಚರಿಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಕೊರೊನಾ ಸೋಂಕು ಯಾವಾಗ, ಎಷ್ಟು ಪ್ರಮಾಣದಲ್ಲಿ ಹರಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಅನುಮತಿ ನೀಡುವುದು, ಏಕಾಏಕಿ ರದ್ದು ಪಡಿಸಿದರೆ ಎಲ್ಲರಿಗೂ ತೊಂದರೆ ಆಗುತ್ತದೆ ಎಂದರು.
ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯನ್ನು ಎಲ್ಲರ ಅಭಿಪ್ರಾಯದಂತೆ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಸಂಪ್ರದಾಯಬದ್ಧವಾಗಿ ನಡೆಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದೇವಸ್ಥಾನ ಟ್ರಸ್ಟ್ ಧರ್ಮದರ್ಶಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಜಾತ್ರೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು. ಕಾರಾ, ಮಂಡಕ್ಕಿ, ಬಳೆ ಮತ್ತಿತರೆ ಅಂಗಡಿಗಳು ಇದ್ದರೇನೆ ಜಾತ್ರೆ ಎನಿಸಿಕೊಳ್ಳುವುದು. ಕಡಿಮೆ ಸಂಖ್ಯೆಯಲ್ಲಿ ಅಂಗಡಿಗಳನ್ನು ತೆರೆಯುವ ಮೂಲಕ ಹಬ್ಬದಾಚರಣೆ ಮಾಡವ ಅಭಿಪ್ರಾಯ ವ್ಯಕ್ತಪಡಿಸಿದರು.
ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಳ್ಳಾರಿ ಷಣ್ಮುಖಪ್ಪ, ಕರಿಗಾರ ಬಸಪ್ಪ ಮತ್ತಿತರರು ಸಾಂಪ್ರದಾಯಕ ಹಾಗೂ ಗ್ರಾಮೀಣ ಕುಸ್ತಿ ಕಲೆ ಮತ್ತು ಟಗರಿನ ಕಾಳಗ ಏರ್ಪಡಿಸುವ ಬಗ್ಗೆ ಸಲಹೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಟ್ರಸ್ಟ್ ಖಜಾಂಚಿ ಅಥಣಿ ಎಸ್.ವೀರಣ್ಣ, ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಟ್ರಸ್ಟ್ ಸದಸ್ಯರಾದ ಜೆ.ಕೆ. ಕೊಟ್ರಬಸಪ್ಪ, ಬಿ.ಹೆಚ್.ವೀರಭದ್ರಪ್ಪ, ಹೆಚ್.ಬಿ. ಗೋಣೆಪ್ಪ, ಉಮೇಶ್ ಸಾಳಂಕಿ, ಪಿ.ಜಿ. ಸತ್ಯನಾರಾಯಣ, ಹನುಮಂತರಾವ್, ಮಾಲತೇಶರಾವ್ ಜಾಧವ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಎನ್. ನೀಲಗಿರಿಯಪ್ಪ, ಪೈಲ್ವಾನ್ ಹೆಚ್.ಜಿ. ಸಂಗಪ್ಪ, ಎಲ್.ಎಂ. ಹನುಮಂತಪ್ಪ, ಇಟ್ಟಿಗುಡಿ ಮಂಜುನಾಥ್, ಲಿಂಗರಾಜ್, ನರಸಿಂಹ ಎಂ.ಬಿ. ಕೇರಿ, ಬಾಬುರಾವ್, ಎಎಸ್ಪಿ ಬಸರಗಿ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಗಜೇಂದ್ರಪ್ಪ ಮತ್ತಿತರರಿದ್ದರು.
ಸಭೆ ಆರಂಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತಾದರೂ, ಶಾಂತಿಯುತವಾಗಿ ಮುಕ್ತಾಯವಾಯಿತು. ಧರ್ಮದರ್ಶಿಗಳು, ಗೌಡರು, ಶಾನುಭೋಗರು, ಬಾಬುದಾರರು, ರೈತರು, ಬಣಕಾರರು, ಕುಂಬಾರರು, ತಳವಾರರು, ಕಾರ್ಯಕರ್ತರು, ಭಕ್ತರು ಪಾಲ್ಗೊಂಡಿದ್ದರು.