ಮುಂದಿನ ಮಾರ್ಗದರ್ಶಕ…..
ಬಸವರಾಜ ಶ್ರೀಗಳಿಗೆ ನಮಸ್ಕರಿಸುವ ಪ್ರತಿಯೊಬ್ಬರೂ ಪಕ್ಕದ ಆಸನದಲ್ಲಿ ಕುಳಿತಿದ್ದ ನಾಲ್ಕು ವರ್ಷದ ಬಾಲಕನ ಕಾಲಿಗೂ ಹಣೆಹಚ್ಚಿ ನಮಸ್ಕರಿಸುತ್ತಿದ್ದ ದೃಶ್ಯ, ಇವರೇ ನಮ್ಮ ಮಠದ ಉತ್ತರಾಧಿಕಾರಿ, ಮುಂದೆ ನಮಗೆ ದಾರಿ ತೋರಿಸುವ ಮಾರ್ಗದರ್ಶಕ ಎನ್ನುವ ಧನ್ಯತಾಭಾವ ಆ ದೃಶ್ಯಗಳಲ್ಲಿ ಹೊರಹೊಮ್ಮುತ್ತಿತ್ತು.
ಕೋಣನತಲೆ ಮೂಲದ ದಂಪತಿಯ ಸಿದ್ದಾರೂಢ ಹೆಸರಿನ ಬಾಲಕನ ಲಕ್ಷಣಗಳನ್ನು ಅವಲೋಕಿಸಿರುವ ಬಸವರಾಜ ಶ್ರೀಗಳು, ಆತನನ್ನು ಕರೆತಂದಿದ್ದು, ಮುಂದಿನ ಆತನ ಬೆಳವಣಿಗೆಯಲ್ಲಿ ಸಂಸ್ಕಾರ ಕಂಡು ಬಂದರೆ ಅವನಿಗೆ ಪಟ್ಟ ಕಟ್ಟುವ ಇಚ್ಛೆ ಉಳ್ಳವರಾಗಿದ್ದಾರೆನ್ನುವ ಮಾತುಗಳು ಕೇಳಿಬಂದವು.
ರಾಣೇಬೆನ್ನೂರು, ಜ.25- ಹರಿಹರದ ಮಠದಲ್ಲಿ ಐರಣಿ ಮುಪ್ಪಿನಾರ್ಯ ಶ್ರೀಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಶ್ರೀ ಮಠದ ಸದ್ಭಕ್ತರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದರು.
ನಿನ್ನೆ ಐರಣಿ ಮಠದ ತುಂಗಭದ್ರೆಯ ತಟದ ಬನ್ನಿ ವನದ ಬಯಲಲ್ಲಿ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸನ್ನಿಧಾನದಲ್ಲಿ ಎಲ್ಲ ಶಾಖಾ ಮಠಗಳ ಸದ್ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಶ್ರೀ ಮಠಕ್ಕೆ ಬಸವರಾಜ ದೇಶಿಕೇಂದ್ರ ಶ್ರೀಗಳ ಉತ್ತರಾಧಿಕಾರಿಯನ್ನು ನೇಮಿಸಬೇಕು. ಆ ಕಾರ್ಯವನ್ನು ಶ್ರೀಗಳಿಗೆ ಒಪ್ಪಿಸುವ ಅಥವಾ ಭಕ್ತರು ವಹಿಸಿಕೊಳ್ಳುವ ವಿಚಾರ, ಹರಿಹರ ಹಾಗೂ ಮೈಸೂರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡುವ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳುವಂತೆ ವಿಷಯ ಮಂಡಿಸಿದ ಮಠದ ಸಂಚಾಲಕ ಸಂಗನಬಸಪ್ಪ (ಬಾಬಣ್ಣ) ಶೆಟ್ಟರ ಮನವಿ ಮಾಡಿದರು.
ಹೊಣೆಹೊರುವ ಎದೆಗಾರಿಕೆ, ಭಕ್ತರನ್ನು ಅಪ್ಪಿಕೊಳ್ಳುವ ಮಾತೃಹೃದಯ, ಮಠದ ಘನತೆ ಎತ್ತರಿಸುವ ದಕ್ಷತೆ, ಧಾರ್ಮಿಕ ಸಂಸ್ಕಾರ ಮುಂತಾದ ಅವಶ್ಯ ಗುಣಲಕ್ಷಣಗಳನ್ನು ಗಮನಿಸಿ, ಉತ್ತರಾಧಿಕಾರಿ ನೇಮಿಸಿಕೊಳ್ಳುವ ಶಕ್ತಿ ಶ್ರೀಗಳಲ್ಲಿದೆ. ಆ ಕಾರ್ಯ ಅವರಿಂದಲೇ ಸಾಧ್ಯವೆಂದು, ಬಂದ ಅಭಿಪ್ರಾಯಗಳಿಗೆ ನೆರೆದಿದ್ದ ಭಕ್ತರೆಲ್ಲರೂ ಸಹಮತ ವ್ಯಕ್ತಪಡಿಸಿದರು.
ಉತ್ತರಾಧಿಕಾರಿ ನೇಮಕದ ನಂತರವೇ ಮೈಸೂರಿನಲ್ಲಿ ಅಡ್ಡಪಲ್ಲಕ್ಕಿ ಜೊತೆಗೆ ಅದ್ಧೂರಿ ದರ್ಬಾರ್ (ಧರ್ಮ ಸಭೆ) ನಡೆಸುವುದು ಉತ್ತಮ ಎನ್ನುವ ಅಭಿಪ್ರಾಯಕ್ಕೂ ಒಕ್ಕೊರಲಿನ ಸಹಮತ ವ್ಯಕ್ತವಾಯಿತು.
ಉತ್ತರಾಧಿಕಾರಿ ನೇಮಕ ವಿಚಾರ ಬಸವರಾಜ ಶ್ರೀಗಳ ನೇಮಕದ ಸಂದರ್ಭದಲ್ಲಿ ಹಾಗೂ ನಾಡಿನ ಇನ್ನಿತರೆ ಅನೇಕ ಮಠಗಳಲ್ಲೂ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡುತ್ತಿರುವುದನ್ನು ಗಮನದಲ್ಲಿಟ್ಟು ಕೊಂಡು ನಿನ್ನೆಯ ಸಭೆ ನಡೆಸಲಾಯಿತು ಎಂದು ಹೇಳಲಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಸವರಾಜ ಶ್ರೀಗಳು ಉಪದೇಶಾಮೃತ ನೀಡಿದರು. ರಾಣೇಬೆನ್ನೂರು, ಐರಣಿ, ಹಿರೇಬಿದರಿ, ಚಳಗೇರಿ, ಕೋಣನತಲೆ, ಬೀರನಕೆರೆ, ಹರಿಹರ, ಕಾಗಿನಲೆ, ಶಿವಮೊಗ್ಗ, ಮೈಸೂರು ಸೇರಿದಂತೆ ಎಲ್ಲ ಶಾಖಾಮಠಗಳ ಭಕ್ತರು ಭಾಗವಹಿಸಿದ್ದರು.