ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 46ನೇ ಸಂಸ್ಥಾಪನಾ ದಿನಾಚರಣೆ

ದಾವಣಗೆರೆ, ಜ.24 – ಭಾರತದಲ್ಲಿ ಪೆಟ್ರೋಲಿಯಮ್ ಉತ್ಪನ್ನಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ನ 46ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶ್ರೀ ಜಯದೇವ ಸರ್ವಿಸ್ ಸ್ಟೇಷನ್  ಆವರಣದಲ್ಲಿ ಇಂದು ಆಚರಿಸಲಾಯಿತು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ  ಹೆಚ್‍.ಎಸ್‍. ರಾಜು ಮಾತನಾಡಿ, ಪೆಟ್ರೋಲಿಯಂ ಕಂಪನಿಗಳು ಮತ್ತು ಡೀಲರ್ ಗಳು ಉತ್ತಮ ಗುಣಮಟ್ಟ ಮತ್ತು ಸೇವೆಯನ್ನು ಕೊಡುವುದರ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಪಿಸಿಎಲ್‍ ಇಂಜಿನಿಯರಿಂಗ್ ಆಫೀಸರ್ ಆವಿಶ್ ಕಾಶಿಫ್ ಮಾತನಾಡಿ,  ಕಳೆದ 46 ವರ್ಷಗಳಿಂದ ಕಂಪನಿಯ ಹಂತ ಹಂತವಾದ ಬೆಳವಣಿಗೆ, ಗ್ರಾಹಕರಿಗೆ ಉತ್ತಮ  ಗುಣಮಟ್ಟ ಮತ್ತು ಸರಿಯಾದ ಅಳತೆಯ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಡುವ ಬಗ್ಗೆ ಬದ್ಧತೆ, ಕಾಳಜಿ, ಇದಕ್ಕಾಗಿ ಇರುವ ಪ್ಯೂರ್ ಫಾರ್‍ ಶ್ಯೂರ್ ಕಾರ್ಯಕ್ರಮಗಳಿಗೆ ಗ್ರಾಹಕರು ಪ್ರಶಂಸೆ ಪಟ್ಟಿದ್ದಾರೆ ಎಂದು ತಿಳಿಸಿದರು.

ಅದೇ ರೀತಿ ಭಾರತ್ ಪೆಟ್ರೋಲಿಯಂ ಮಾತ್ರ ಒದಗಿಸುತ್ತಿರುವ  ಯುಫೀಲ್‍, ಫೈನೋ ಪೇಮೆಂಟ್ ಬ್ಯಾಂಕ್‍  ಮತ್ತು ಪರಿಸರ ಸ್ನೇಹಿ ಇಂಧನ ವಾದ ಸಿಎನ್‍ಜಿ ಇವುಗಳಿಗೆ ಭಾರತ್ ಪೆಟ್ರೋಲಿಯಂ ನಿಂದ ಹೆಚ್ಚು ಉತ್ತೇಜನ ಕೊಡುತ್ತಿರುವುದು ಮತ್ತು ಅತ್ಯಂತ ಉನ್ನತ ಸೇವಾ ಗುಣಮಟ್ಟದ ನೆಕ್ಸ್ಟ್‍ ಜೆನ್‍  ಪ್ಯೂರ್‍ ಎನ್ನುವ ವಿಶಿಷ್ಟ ಯೋಜನೆಯನ್ನು ಇಂದಿನಿಂದ ಭಾರತದಾದ್ಯಂತ 100  ನಗರಗಳಲ್ಲಿ ಪ್ರಾರಂಭಿಸುತ್ತಿದ್ದು, ಅದರಲ್ಲಿ ದಾವಣಗೆರೆ ನಗರವೂ  ಸೇರುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಆನೆಕೊಂಡದ ಶಿವ ಸರ್ವೀಸ್ ಸ್ಟೇಷನ್ ಮಾಲೀಕ ಕೋಗುಂಡಿ ಬಕ್ಕೇಶಪ್ಪ, ಶ್ರೀ ಜಯದೇವ ಸರ್ವೀಸ್ ಸ್ಟೇಷನ್ ಮಾಲೀಕ ಎಂ. ಜಯಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಶ್ವಾಸ್ ಪೆಟ್ರೋಲ್ ಬಂಕ್ ಮಾಲೀಕ ಮನೋಹರ್ ನಿರೂಪಿಸಿದರು.

error: Content is protected !!