ದಾವಣಗೆರೆ, ಜ. 24- ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ನೀಡಬೇಕೆಂಬುದಕ್ಕೆ ತಮ್ಮ ಸಹ ಮತ ಇದೆ. ಆದರೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟ ವಿಚಾರ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರೆಲ್ಲರೂ ಒಟ್ಟಾಗಿ ಬಂದರೆ ತಾವೂ ಕೂಡ ಸಚಿವ ಸ್ಥಾನ ನೀಡುವಂತೆ ಒತ್ತಡ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾರೂ ಬಾರದೇ ನಾನೇ ಹೋಗಿ ಮುಜಗರ ಅನುಭವಿಸಲಾ ಎಂದರು.
ಪಕ್ಷದಲ್ಲಿ ಯಾವುದೇ ಗೊಂದಲವಾಗಲೀ, ಭಿನ್ನಮತವಾಗಲೀ ಇಲ್ಲ. ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಯಾರಿಗೆ ಕೊಡಬೇಕು, ಯಾರನ್ನು ಕೈಬಿಡಬೇಕು ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
ಸಂತೋಷ: ನನಗೆ ಸಚಿವ ಸ್ಥಾನ ಕೊಟ್ಟರೆ ಸಂತೋಷ, ಕೊಡದಿದ್ದರೂ ದುಃಖಪಡುವುದಿಲ್ಲ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ಜಿಲ್ಲೆಯ ಶಾಸಕರುಗಳಿಗೆ ವಿವಿದ ಸ್ಥಾನಮಾನಗಳನ್ನು ನೀಡಲಾಗಿದೆ. ರೇಣುಕಾಚಾರ್ಯ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ ಅವರಿಗೆ ವಿವಿಧ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನಾನೂ ಕೂಡ ಏಳು ವರ್ಷ ಮಂತ್ರಿಯಾಗಿದ್ದ ಕಾರಣ ನನಗೆ ಸಚಿವ ಸ್ಥಾನ ನೀಡಿಲ್ಲ ಎಂದರು.