ದಾವಣಗೆರೆ, ಜ. 20- ಹರಿಹರ ತಾಲ್ಲೂಕು ಚಿಕ್ಕಬಿದರಿ ಗ್ರಾಮಕ್ಕೆ ಸಕ್ಕರೆ ಹಾಗೂ ಡಿಸ್ಟಿಲರಿ ಕಾರ್ಖಾನೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಗೆ ಕಾರ್ಖಾನೆಯವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಯಾ ಕಾರ್ಖಾನೆಗಳಿಗೆ ಕಾಲಮಿತಿ ನಿಗದಿಪಡಿಸಿ ಸೂಚನೆ ನೀಡಿದ್ದಾರೆ.
ಚಿಕ್ಕಬಿದರಿ ಗ್ರಾಮದ ಸುತ್ತಮುತ್ತ ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಿಲರಿ ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತಂತೆ ಕಾರ್ಖಾನೆಯವರು, ಪರಿಸರ ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಮನೂರು ಶುಗರ್ಸ್ ಹಾಗೂ ಶ್ಯಾಮ್ಸನ್ ಡಿಸ್ಟಿಲರಿ ಕಾರ್ಖಾನೆಯಿಂದ ಹಾರುಬೂದಿ ಹಾಗೂ ತ್ಯಾಜ್ಯ ನೀರು ಬಿಡುಗಡೆಯ ಕಾರಣದಿಂದಾಗಿ ಚಿಕ್ಕಬಿದರಿ ಗ್ರಾಮ ವ್ಯಾಪ್ತಿಯಲ್ಲಿ ಗಾಳಿ, ನೀರು ಮಲಿನವಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೈ ಗೊಂಡ ಕ್ರಮಗಳ ಬಗ್ಗೆ ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಯ ಪರಿಸರ ಅಧಿಕಾರಿಗಳನ್ನು ಪ್ರಶ್ನಿಸಿದರು.
ವಿಜಯನಗರ ಜಿಲ್ಲೆ ಪರಿಸರ ಅಧಿಕಾರಿ ರಾಜು ಮಾತನಾಡಿ, ಎರಡೂ ಕಾರ್ಖಾನೆಗಳಿಂದ ಮಾಲಿನ್ಯವಾ ಗುತ್ತಿರುವುದು ಕಂಡುಬಂದಿದ್ದು, ನೋಟಿಸ್ ನೀಡಿ ಮಾಲಿನ್ಯ ತಡೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಕಾರ್ಖಾನೆಗಳನ್ನು ನೆಚ್ಚಿಕೊಂಡು ನೂರಾರು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ಆದರೆ ಕಾರ್ಖಾನೆಗಳೂ ಕೂಡ ಜನರ ಬದುಕಿಗೆ ತೊಂದರೆ ಉಂಟು ಮಾಡುತ್ತಿರುವುದನ್ನೂ ಕೂಡ ಒಪ್ಪಲು ಸಾಧ್ಯವಿಲ್ಲ. ಕಾರ್ಖಾನೆಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಮಾಲಿನ್ಯ ರಹಿತ ಉದ್ಯಮ ನಡೆಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮಹಾಂತೇಶ್ ಹೆಚ್.ಬಿ., ಗ್ರಾಮಸ್ಥ ಬಸಪ್ಪ, ಹಾಲೇಶ್.ಜಿ, ಸ್ವಾಮಿ ಅವರುಗಳು ಕಾರ್ಖಾನೆಗಳಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳ ಮೇಲಾಗುತ್ತಿ ರುವ ಪರಿಣಾಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್ಒ ಡಾ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಕುಮಾರ್, ಸೇರಿದಂತೆ, ಹರಪನಹಳ್ಳಿ ತಾಲ್ಲೂಕು ತಹಶೀಲ್ದಾರ್, ಹರಿಹರ ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಅಲ್ಲದೆ ಚಿಕ್ಕಬಿದರಿ ಗ್ರಾಮಸ್ಥರು ಸಭೆಯಲ್ಲಿದ್ದರು.