ಶೇ.99ರಷ್ಟು ಜನರು ಗುಣಮುಖ, ಒಂಭತ್ತು ಜನ ಮಾತ್ರ ಆಕ್ಸಿಜನ್ನಲ್ಲಿ
ದಾವಣಗೆರೆ, ಜ. 18 – ಕೊರೊನಾ ಮೂರನೇ ಅಲೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ 1,036 ಸಕ್ರಿಯ ಸೋಂಕಿತರನ್ನು ಗುರುತಿಸಲಾಗಿದೆ. ಆದರೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಕೇವಲ ಒಂಭತ್ತು ಜನ ಮಾತ್ರ ಆಕ್ಸಿಜನ್ನಲ್ಲಿ ಇದ್ದಾರೆ. ಬಹುತೇಕ ಸೋಂಕಿತರು ಲಕ್ಷಣ ರಹಿತರಾಗಿದ್ದರೆ, ಸೋಂಕಿತರು ತ್ವರಿತವಾಗಿ ಗುಣವಾಗುತ್ತಿದ್ದಾರೆ.
ಕಳೆದ ಬಾರಿ ಬಂದಿದ್ದ ಡೆಲ್ಟಾ ಅಲೆಯಲ್ಲಿ ಉಸಿರಾಟದ ಸಮಸ್ಯೆ ಸಾಕಷ್ಟು ಜನರಲ್ಲಿ ಕಂಡು ಬಂದಿತ್ತು. ಆದರೆ, ಓಮಿಕ್ರಾನ್ ಅಲೆ ಜಿಲ್ಲೆಯಲ್ಲಿ ಹೆಚ್ಚೇನೂ ಪರಿಣಾಮ ಬೀರಿದ್ದು ಕಂಡು ಬಂದಿಲ್ಲ. ಮೂರನೇ ಅಲೆಯಲ್ಲಿ ಮಂಗಳವಾರ 80 ವರ್ಷದ ವೃದ್ಧೆ ಮೃತ ಪಟ್ಟಿದ್ದಾರೆ. ಇವರನ್ನು ಹೊರತು ಪಡಿಸಿದರೆ ಉಳಿದಂತೆ ಶೇ.99ಕ್ಕೂ ಹೆಚ್ಚು ಜನರು ಈಗಾಗಲೇ ಚೇತರಿಸಿ ಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಆಕ್ಸಿಜನ್ನಲ್ಲಿ ಇರುವವರೂ ಸಹ ಆರೋಗ್ಯ ಸಮಸ್ಯೆ ಹೆಚ್ಚು ತೀವ್ರವಾಗಿಲ್ಲ. ಮೂರನೇ ಅಲೆಯಲ್ಲಿ ಜನರು ಗುಣವಾಗುವ ವೇಗವೂ ಹೆಚ್ಚಾಗಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಸಿಲುಕಿದವರನ್ನು 14 ದಿನಗಳ ನಂತರ ಗುಣವಾದ ವರು ಎಂದು ಪರಿಗಣಿಸಲಾಗುತ್ತಿತ್ತು. ಈಗ ತೀವ್ರತೆ ಕಡಿಮೆ ಇರುವ ಕಾರಣ ಏಳು ದಿನಗಳಲ್ಲೇ ಗುಣವಾದ ವರು ಎಂದು ಪರಿಗಣಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ತಿಳಿಸಿದ್ದಾರೆ.
ಮಕ್ಕಳೂ ಸೇರಿ ಸೋಂಕಿತರ ತ್ವರಿತ ಚೇತರಿಕೆ: ಯಾವ ಮಗುವಿಗೂ ಕಂಡಿಲ್ಲ ಆಕ್ಸಿಜನ್ ಅಗತ್ಯ
ಶೇ.65ರಷ್ಟು ಅರ್ಹರಿಗೆ ಬೂಸ್ಟರ್ ಲಸಿಕೆ
ದಾವಣಗೆರೆ, ಜ. 18 – ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ವಿತರಣೆಯಲ್ಲಿ ಶೇ.65ರ ಸಾಧನೆಯಾಗಿದೆ ಎಂದು ಜಿಲ್ಲಾಡಳಿತದ ಹೇಳಿಕೆಯಲ್ಲಿ ತಿಳಿಸಲಾಗಿದೆ
ಕೋವಿಡ್ ಪೋರ್ಟಲ್ನಲ್ಲಿರುವಂತೆ 10,771 ಜನರು ಬೂಸ್ಟರ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಇದುವರೆಗೂ ಒಟ್ಟಾರೆ 7,038 ಜನರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೀರಿದ ಸಹ ಅಸ್ವಸ್ಥತೆ ಉಳ್ಳವರಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಇದುವರೆಗೂ 4,247 ಆರೋಗ್ಯ ಕಾರ್ಯಕರ್ತರು, 945 ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೀರಿದ 1,845 ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.
ಜಿಲ್ಲೆಯಲ್ಲಿ 257 ಪಾಸಿಟಿವ್ : 3ನೇ ಅಲೆಯ ಮೊದಲ ಸಾವು
ದಾವಣಗೆರೆ, ಜ.18- ಜಿಲ್ಲೆಯಲ್ಲಿ 257 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಹೊನ್ನಾಳಿ ತಾಲ್ಲೂಕಿನ ಸೊಪ್ಪಿನಕೇರಿಯ 80 ವರ್ಷ ವೃದ್ಧೆ ಸೋಂಕಿನಿಂದಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸಕ್ರಿಯ ಸೋಂಕಿತರ ಸಂಖ್ಯೆ 1036ಕ್ಕೆ ಏರಿಕೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 146, ಹರಿಹರ 40, ಜಗಳೂರು 20, ಚನ್ನಗಿರಿ 29, ಹೊನ್ನಾಳಿ ತಾಲ್ಲೂಕಿನ 22 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 126 ಜನರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 52376 ಜನರಲ್ಲಿ ಸೋಕು ಕಾಣಿಸಿಕೊಂಡಿದ್ದು, 50732 ಜನರು ಗುಣಮುಖರಾಗಿದ್ದಾರೆ. 609 ಜನರು ಸಾವನ್ನಪ್ಪಿದ್ದಾರೆ.
ಕೊರೊನಾದ ಮೂರನೇ ಅಲೆ ಮಕ್ಕಳಿಗೆ ಅಪಾಯ ತರುತ್ತದೆ ಎಂದು ಈ ಹಿಂದೆ ದೊಡ್ಡದಾಗಿ ಅಪಪ್ರಚಾರ ಮಾಡಿದ್ದೂ ಸಹ ಹುಸಿಯಾಗಿದೆ. ಕೊರೊನಾ ಸೋಂಕಿಗೆ ಗುರಿಯಾದ ಶೇ.99ರಷ್ಟು ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ.
ಮಕ್ಕಳ ಸೋಂಕಿನ ಬಗ್ಗೆ ಮಾತನಾಡಿರುವ ರಾಘವನ್, ಶೇ.99ರಷ್ಟು ಮಕ್ಕಳು ಲಕ್ಷಣ ರಹಿತರು ಇಲ್ಲವೇ ಲಕ್ಷಣ ಬರುವುದಕ್ಕೆ ಮುಂಚಿನ ಹಂತದಲ್ಲಿದ್ದಾರೆ. ಅವರು ಸ್ವಲ್ಪ ಮಾತ್ರದ ಚಿಕಿತ್ಸೆಯಿಂದಲೇ ಸ್ಪಂದಿಸುತ್ತಿದ್ದಾರೆ. ಇದುವರೆಗೆ ಸೋಂಕು ಕಂಡು ಖಚಿತವಾದ 281 ಮಕ್ಕಳಲ್ಲಿ ಒಂದು ಮಗುವಿಗೂ ಆಕ್ಸಿಜನ್ ಅಗತ್ಯ ಕಂಡು ಬಂದಿಲ್ಲ ಎಂದು ರಾಘವನ್ ತಿಳಿಸಿದ್ದಾರೆ.
ವಯಸ್ಕರಲ್ಲೂ ಸಹ ಶೇ.99ರಷ್ಟು ಜನರಿಗೆ ಆಕ್ಸಿಜನ್ ಅಗತ್ಯ ಕಂಡು ಬರುತ್ತಿಲ್ಲ. ಲಸಿಕೆಯಿಂದಾಗಿ ದೊರೆಯುವ ಆಂಟಿಬಡಿಗಳು ಹಾಗೂ ಲಸಿಕೆಯಿಂದ ಸಿಗುವ ರೋಗ ನಿರೋಧಕ ಶಕ್ತಿಯು ಸೋಂಕು ತೀವ್ರತೆ ಹೆಚ್ಚಾಗದಿರಲು ಪ್ರಮುಖ ಕಾರಣ ಎಂದವರು ಹೇಳಿದ್ದಾರೆ.
ಯಾವುದೇ ವೈರಸ್ ಮಹಾಮಾರಿಯಂತೆ ಹರಡಿದ ನಂತರ ಅದರ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಸಮುದಾಯದಲ್ಲಿ ರೋಗ ಹರಡಿ ದೊಡ್ಡ ಸಂಖ್ಯೆಯ ಜನರಲ್ಲಿ ರೋಗ ನಿರೋಧಕತೆ ಉಂಟಾಗುವುದು ಇದಕ್ಕೆ ಕಾರಣ. ಅಲ್ಲದೇ, ನಿರಂತರ ಮ್ಯುಟೇಷನ್ ಕಾರಣದಿಂದ, ವೈರಸ್ ಹೆಚ್ಚು ವೇಗವಾಗಿ ಹರಡಿದರೂ ಅದರ ತೀವ್ರತೆ ಕಡಿಮೆಯಾಗುತ್ತದೆ ಎಂದು ರಾಘವನ್ ವಿವರಿಸಿದ್ದಾರೆ.
ದೇಹದಲ್ಲಿ ಮೊದಲೇ ಆಂಟಿಬಡಿಗಳು ಇದ್ದ ಸಂದರ್ಭದಲ್ಲಿ, ಸೋಂಕು ಬಂದಾಗ ತ್ವರಿತವಾಗಿ ಚಿಕಿತ್ಸೆ ಆರಂಭಿಸುವುದು ರೋಗ ತೀವ್ರತೆ ಕಡಿಮೆ ಮಾಡಲು ನೆರವಾಗುತ್ತದೆ ಎಂದವರು ಹೇಳಿದ್ದಾರೆ.