ಬಿಇಓ ಅಂಬಣ್ಣ ಶ್ಲ್ಯಾಘನೆ
ದಾವಣಗೆರೆ, ಜ. 19- ಜನಪ್ರತಿನಿಧಿಗಳು, ಗ್ರಾಮದ ದಾನಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು, ಶಾಲಾ ಎಸ್ಡಿಎಂಸಿ ಹಾಗೂ ಶಿಕ್ಷಕ ವೃಂದದವರಿಂದ ಶಾಲೆಗಳು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಉತ್ತಮ ಪರಿಸರದೊಂದಿಗೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ದಾವಣಗೆರೆ ಉತ್ತರ ವಲಯ ಬಿಇಒ ಟಿ. ಅಂಬಣ್ಣ ಅಭಿಪ್ರಾಯಪಟ್ಟರು.
ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಏರ್ಪಾಡಾಗಿದ್ದ ಆಂಗ್ಲ ಮತ್ತು ಹಿಂದಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಲೆಬೇತೂರಿನಲ್ಲಿ 3-4 ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿದ್ದಾಗ್ಯೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದರು. ಸದರಿ ಖಾಸಗಿ ಶಾಲಾ ಮಕ್ಕಳು ಸರ್ಕಾರಿ ಶಾಲೆಯ ಕಡೆಗೆ ಹೆಚ್ಚು ಮುಖ ಮಾಡುತ್ತಿರುವುದು ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿಕೆಯ ಮಟ್ಟ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ದಿಕ್ಕಿನಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸುಮಾ ವಿರೂಪಾಕ್ಷಪ್ಪ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದಾವಣಗೆರೆ ಉತ್ತರ ವಲಯದ ಬಿಆರ್ಸಿ ಸುರೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ ಮಾತನಾಡಿದರು.
ಸ್ಥಳೀಯ ಶಾಲಾ ಶಿಕ್ಷಣ ಪ್ರೇಮಿ ಹಾಗೂ ಎಸ್ಡಿಎಂಸಿ ಸದಸ್ಯ ಎಂ. ಷಡಕ್ಷರಪ್ಪ, ಬಿ.ಜಿ. ಬಸವರಾಜ್, ಎ.ಕೆ. ಶಿವಕುಮಾರ್, ಗ್ರಾ.ಪಂ. ಸದಸ್ಯ ಬಿ. ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಾತ, ಶಿಕ್ಷಣ ಇಲಾಖೆಯ ಶ್ರೀಮತಿ ಸರಳಾ, ಶ್ರೀಮತಿ ಶಿವಲೀಲಾ, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಆಂಗ್ಲ ಮತ್ತು ಹಿಂದಿ ಮಾಧ್ಯಮ ಶಿಕ್ಷಕಿಯರಾದ ಶ್ರೀಮತಿ ಗಂಗಮ್ಮ, ಜೆ.ಟಿ. ಕವಿತಾ ಸ್ಮಾರ್ಟ್ ಕ್ಲಾಸ್ ಆಯೋಜಿಸಿರುವ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಕ್ಲಾಸ್ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಾದ ರಂಗನಾಥ ಕ್ರಷರ್ನ ಬಿ. ಮಂಜುನಾಥ, ಬಿ.ಜಿ. ಸಂಗನಗೌಡ್ರು, ಕು|| ಬಿ.ಕೆ. ದಯಾನಂದ, ರಮೇಶ್ ಎಲಿಗಾರ, ಚೇತನ್ಕುಮಾರ್ ಹಂಚಿನಮನಿ ಅವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಎ.ಆರ್. ಗೋಪಾಲ್ ಸ್ವಾಗತಿಸಿದರು. ವಿದ್ಯಾರ್ಥಿ ಚೇತನಕುಮಾರ್ನಿಂದ ಪ್ರಾರ್ಥನೆ. ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ನಿರೂಪಿಸಿದರು. ಶಿಕ್ಷಕ ಗಣೇಶಯ್ಯ ವಂದಿಸಿದರು.