ದಾವಣಗೆರೆ, ಜ.11- ಒಪ್ಪಿಗೆ ಪಡೆಯದೆ ರೈತರ ಜಮೀನುಗಳಿಗೆ ದೂಡಾದಿಂದ ದರ ನಿಗದಿ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹಳೇ ಕುಂದವಾಡ ಗ್ರಾಮದ ರೈತರು ನಗರದಲ್ಲಿಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಹಾಗೂ ದೂಡಾ ಕಚೇರಿಯಲ್ಲಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಮತ್ತು ಉಪವಿಭಾಗಾಧಿಕಾರಿ ಮಮತಾ ಹೊಸ ಗೌಡರ್ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ 2018-19ರಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಮ್ಮ ಗ್ರಾಮದಲ್ಲಿ ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಹಳೇ ಕುಂದುವಾಡ ಗ್ರಾಮದ ಸರ್ವೆ ನಂ. 125 ರಿಂದ 139/7 ರ ತನಕ ಒಟ್ಟು 59,19 ಎಕರೆ ಜಮೀನಿನಲ್ಲಿ ನಾಗರಿಕರ ವಾಸಕ್ಕೆ ಹೊಸ ಲೇಔಟ್ ನಿರ್ಮಾಣಕ್ಕೆಂದು ಗ್ರಾಮದ ರೈತರ ಜಮೀನುಗಳನ್ನು ಒಳ್ಳೆಯ ಬೆಲೆ ಕೊಟ್ಟು ಖರೀದಿ ಮಾಡಿಕೊಳ್ಳುವುದಾಗಿ ಹೇಳಿ ಒಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದರು. ಕೆಲವು ರೈತರು ಕೋರ್ಟ್ ಗೆ ಹೋಗಿ ಶಾಶ್ವತ ನಿರ್ಬಂಧಕಾಜ್ಞೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ನಮ್ಮ ಜಮೀನುಗಳಿಗೆ ಏಕಾಏಕಿ ಬಂದು ಅಳತೆ ಮಾಡಿ ಕಂಬಗಳನ್ನು ಹಾಕಲಾಗಿದೆ ಎಂದು ರೈತರು ತಿಳಿಸಿದರು.
ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಕರೆದಾಗ ಸಭೆಯಲ್ಲಿ ಒತ್ತಾಯ ಪೂರ್ವಕವಾಗಿ ಯಾವ ರೈತರ ಜಮೀನುಗಳನ್ನು ಪಡೆದುಕೊಳ್ಳುವುದಿಲ್ಲ. ನಿಮಗೆ ಕೊಡಬೇಕೆನಿಸಿದರೆ ಮಾತ್ರ ಖರೀದಿ ಮಾಡಿಕೊಳ್ಳುತ್ತೇವೆ ಎಂದು ಹೇಳಲಾಗಿತ್ತು. ಅಂದು ಸಭೆಯಲ್ಲಿ ಜಮೀನು ದರ ನಿಗದಿಯಾಗದೇ ಸಭೆ ಅಂತ್ಯಗೊಂಡಿತ್ತು. ಆದರೆ ಇದೀಗ ಕುಂದುವಾಡ ರೈತರು ವಸತಿ ಯೋಜನೆಗೆ ಸಮ್ಮತಿ ಸೂಚಿಸಿದ ಬಗ್ಗೆ ಹಾಗೂ ಎಕರೆಗೆ 1.18 ಕೋಟಿ ಜಮೀನಿನ ಬೆಲೆ ನಿಗದಿಯಾಗಿದೆ ಎಂದು ಹೇಳಲಾಗಿದೆ. ಯಾವಾಗ ದರ ನಿಗದಿ ಸಭೆ ಮಾಡಿದ್ದಾರೆ ಎಂಬುದು ರೈತರಿಗೆ ಗೊತ್ತಿಲ್ಲ. ದರ ನಿಗದಿ ಎರಡನೇ ಸಭೆಗೆ ಬಹುತೇಕ ರೈತರನ್ನು ಆಹ್ವಾನಿಸದೇ, ಕೇವಲ ನಾಲ್ಕೈದು ಮಂದಿ ರೈತರ ಒಪ್ಪಿಗೆ ಪಡೆದು ಎಲ್ಲಾ ರೈತರ ಒಪ್ಪಿಗೆ ಪಡೆಯಲಾಗಿದ್ದು, 53 ಎಕರೆ ಲೇಔಟ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದೂಡಾ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಅಡಗಿದೆ ಎಂದು ಆರೋಪಿಸಿದರು.
ಯಾವುದೇ ರೈತರನ್ನು ಕರೆಸದೇ ಸಭೆ ಮಾಡಿ, ಪತ್ರಿಕಾ ಪ್ರಕಟಣೆ ನೀಡಿರುವುದು ಅಕ್ಷಮ್ಯ ಅಪರಾಧ. ತಕ್ಷಣವೇ ಈ ಹೇಳಿಕೆ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.