ಮಠದ ಕುಟುಂಬಸ್ಥರನ್ನೇ ಮರಿಸ್ವಾಮಿ ಮಾಡಲು ಮಠದ ಪಲ್ಲಕ್ಕಿ ಹೊರಡಿಸಿ, ಇಬ್ಬರು ಮಕ್ಕಳಿಂದ ಚೀಟಿ ಎತ್ತುವ ಮೂಲಕ ಒಪ್ಪಿಗೆಯಾದರೂ, ಮರಿ ಸ್ವಾಮಿಗಳು ಸಮರ್ಪaಕ ಆಡಳಿತ ನಡೆಸಲು 10 ರಿಂದ 15 ವರ್ಷಗಳು ಬೇಕಿದೆ. ಅಲ್ಲಿಯವರೆಗೂ ಮಠದ ಆಡಳಿತ ನೋಡಿಕೊಳ್ಳುವವರು ಯಾರು ಎಂಬ ವಿಷಯ ಮಾತ್ರ ಪರ-ವಿರೊಧಗಳಿಂದಾಗಿ ಅಂತಿಮ ಗೊಳಿಸಲು ಸಾಧ್ಯವಾಗದೇ ಸಭೆ ಮುಂದೂಡಲಾಗಿದೆ.
ಹೊನ್ನಾಳಿ, ಜ.5- ತಾಲ್ಲೂಕಿನ ರಾಂಪುರ ಹಾಲಸ್ವಾಮಿ ಮಠಕ್ಕೆ ಪೀಠಾಧಿಪತಿಗಳನ್ನು ನೇಮಕ ಮಾಡುವ ವಿಷಯವಾಗಿ ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ಇಂದು ನಡೆದ ಸಭೆಯು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲಾಗದೆ ನಾಳೆಗೆ ಮುಂದೂಡಲಾಯಿತು.
ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಸಂಸ್ಥಾನ ಪೀಠಕ್ಕೆ ಪಂಚ ಪೀಠಗಳಲ್ಲೊಂದಾದ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನಿನ್ನೆ ತಡ ರಾತ್ರಿ ಆಗಮಿಸಿದ್ದು, ಮಠಕ್ಕೆ ಕಾಶಿ ಶ್ರೀಗಳ ದಿಢೀರ್ ಆಗಮನದ ಸುದ್ಧಿ ರಾಂಪುರ ಬೃಹನ್ಮಠದ ಭಕ್ತ ಸಮೂಹದಲ್ಲಿ ಭಾರೀ ಕುತೂಹಲ ಮೂಡಿಸಿತು.
ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಕೋವಿಡ್‍ನಿಂದ ಅಕಾಲಿಕವಾಗಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠದ ಪೀಠಾಧ್ಯಕ್ಷ ಸ್ಥಾನ ಕಳೆದ ಒಂದೂವರೆ ವರ್ಷಗಳಿಂದ ಶೂನ್ಯವಾಗಿತ್ತು.
ಈ ಮಠವು ಕಾಶಿ ಪೀಠದ ಶಾಖಾ ಮಠವಾದ ಕಾರಣಕ್ಕೆ, ಇದರ ಉತ್ತರಾಧಿಕಾರಿ ನೇಮಕ ಕಾಶಿ ಶ್ರೀಗಳ ಜವಾಬ್ದಾರಿಯಾಗಿದ್ದರಿಂದ ಅವರು ಬುಧವಾರ ಸಾವಿರಾರು ಭಕ್ತ ಸಮೂಹದ ಮುಂದೆ ಉತ್ತರಾಧಿಕಾರಿ ನೇಮಕ ಸಭೆಯ ಸಾನ್ನಿಧ್ಯ ವಹಿಸಿಕೊಂಡು ಮಠದ ಕರ್ತೃಗದ್ದಿಗೆಯ ಉತ್ಸವ ಮೂರ್ತಿಯ ಮೂಲಕ ಉತ್ತರಾಧಿಕಾರಿ ನೇಮಕಕ್ಕೆ ಮುಂದಾಗಿದ್ದು, ನೆರೆದಿದ್ದ ಭಕ್ತ ಸಮೂಹವನ್ನೇ ಅಚ್ಚರಿಗೊಳಿಸಿತು.
ಮಠಕ್ಕೆ ಉತ್ತರಾಧಿಕಾರಿ ನೇಮಕದ ವಿಚಾರದಲ್ಲಿ ಲಿಂಗೈಕ್ಯ ಶ್ರೀಗಳ ಸಹೋದರ ಸಂಬಂಧಿಗಳಲ್ಲಿ ಎರಡು ಪಂಗಡಗಳು ಹುಟ್ಟಿಕೊಂಡು, ಕಳೆದ ಆರು ತಿಂಗಳಿಂದ ಕಾಶಿ ಶ್ರೀಗಳ ಬಳಿ ತೆರಳಿ ಪರ, ವಿರೋಧದ ದೂರುಗಳನ್ನು ಹೇಳಿಕೊಂಡು ಬಂದಿದ್ದವು. ಇದಕ್ಕೆ ಏನನ್ನೂ ಪ್ರತಿಕ್ರಿಯಿಸದ ಕಾಶಿ ಶ್ರೀಗಳು ಸ್ವತಃ ಏನನ್ನೂ ತೀರ್ಮಾನಿಸದೆ ಮಠದ ಕರ್ತೃ ಗದ್ದಿಗೆಯ ಉತ್ಸವ ಮೂರ್ತಿ ಪಲ್ಲಕ್ಕಿಯ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರೋಣ ಎಂದು ಈ ಹಿಂದೆ ಎರಡೂ ಪಂಗಡಗಳಿಗೆ ಹೇಳಿ ಕಳಿಸಿದ್ದರಂತೆ.
ಅದರಂತೆ ಬುಧವಾರ ಶ್ರೀಗಳು ಎರಡೂ ಪಂಗಡದ ಮಧ್ಯೆ ಚರ್ಚೆಗೆ ಮುಂದಾಗಿದ್ದು, ಶ್ರೀಗಳು ಬುಧವಾರ ಮಠದ ಕರ್ತೃ ಗದ್ದುಗೆಯಲ್ಲಿ ತಮ್ಮ ನಿತ್ಯ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು, ಕರ್ತೃಗದ್ದುಗೆಯ ಆವಿಗೆಗಳನ್ನು ಹೊತ್ತ ಹಾಲಸ್ವಾಮಿ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಇಬ್ಬರು ಭಕ್ತರ ಮೂಲಕ ಹೊರಿಸಿ ಅಲ್ಲಿಯೇ ಭಕ್ತರು ಕರೆತಂದಿದ್ದ ಎರಡು ಪುಟ್ಟ ಮಕ್ಕಳ ಜೇಬಿನಲ್ಲಿ ಈ ಎರಡು ವಿಷಯ ಕುರಿತಾದ ಚೀಟಿ ಬರೆದಿಟ್ಟಿರುವುದನ್ನು ತೋರಿಸಲು ಸೂಚಿಸಿದರು.
ಉತ್ಸವ ಮೂರ್ತಿಗೆ ಹೇಳಿದಾಗ ಅದು ಪುತ್ರವರ್ಗ ಮಠ ಇದಕ್ಕೆ ಪುತ್ರ ವರ್ಗದಲ್ಲಿಯೇ ಉತ್ತರಾಧಿಕಾರಿ ಮಾಡಬೇಕು ಎಂಬ ಚೀಟಿ ಇಟ್ಟುಕೊಂಡ ಮಗುವನ್ನು ಉತ್ಸವಮೂರ್ತಿ ತೋರಿಸಿದ್ದು, ಎರಡೂ ಪಂಗಡಗಳ ಮಧ್ಯೆ ಹುಟ್ಟಿದ ಒಂದು ಗೊಂದಲಕ್ಕೆ ತೆರೆ ಬಿದ್ದಂತಾಗಿತ್ತು.
ಮುಂದುವರಿದ ಭಾಗವಾಗಿ ಪುತ್ರ ವರ್ಗದಲ್ಲಿ ಉತ್ತರಾಧಿಕಾರಿ ಆಗ ಬಯಸುವ ಆಕಾಂಕ್ಷಿಗಳ ಪಟ್ಟಿ ಕಾಶಿ ಶ್ರೀಗಳ ಕೈ ಸೇರಬೇಕಿದ್ದು, ಆನಂತರದಲ್ಲಿ ಅವರುಗಳ ಜಾತಕ ಫಲಗಳನ್ನು ಆಧರಿಸಿ ಮತ್ತೆ ಅಂತಿಮ ಆಯ್ಕೆ ಮಾಡಲಾಗುವುದು ಎಂದು ಕೊನೆಯದಾಗಿ ಕಾಶಿ ಶ್ರೀಗಳು ಹೇಳಿದರು.
ಮಧ್ಯಾಹ್ನದ ನಂತರ ಅಂದಿನಿಂದ ಇಂದಿನವರೆಗೆ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲಿಂಗೈಕ್ಯ ಶ್ರೀಗಳ ಸಹೋದರ ಶಿವಕುಮಾರ ಸ್ವಾಮಿಗಳು, ಮುಂದಿನ ದಿನಗಳಲ್ಲಿ ಉಸ್ತುವಾರಿ ಮಾಡಬೇಕೇ? ಬೇಡವೇ? ಎಂಬ ವಾಕ್‍ಸಮರ ಎರಡೂ ಪಂಗಡಗಳ ಮಧ್ಯೆ ಗಂಟೆಗಟ್ಟಲೇ ನಡೆದಿದ್ದನ್ನು ಮೂಕ ಪ್ರೇಕ್ಷಕರಂತೆ ವೀಕ್ಷಣೆ ಮಾಡಿದ ಕಾಶಿ ಶ್ರೀಗಳು, ಕಡೆಯದಾಗಿ ಈ ವಿಚಾರವನ್ನು ನಾಳೆ ದಿನ ಮತ್ತೆ ಉತ್ಸವ ಮೂರ್ತಿಯನ್ನು ಹೊರಡಿಸಿ ಅಂತ್ಯಗೊಳಿಸುವ ನಿರ್ಧಾರ ಮಾಡಿ ಸಭೆಯನ್ನು ಅಂತ್ಯಗೊಳಿಸಿದರು.
ಕಾರ್ಯಕ್ರಮದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಳವಂಡಿ ಮಠದ ಶ್ರೀ ಮರುಳುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಜಾನಕೋಟಿ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠ, ರಾಂಪುರ ಹಾಲಸ್ವಾಮಿ ಮಠದ ಶಾಖಾ ಮಠದ ಹತ್ತಾರು ಮಠಾಧೀಶ್ವರರು ಉಪಸ್ಥಿತರಿದ್ದರು.
ಮಠದ ಆವರಣದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್, ಪಿಎಸ್‍ಐ ಬಸವನಗೌಡ ಬಿರಾದಾರ್ ತಂಡ ಬೀಡುಬಿಟ್ಟಿದ್ದು ಮಠಕ್ಕೆ ಸೂಕ್ತ ಭದ್ರತೆ ಒದಗಿಸಿದೆ.
ಈ ಹಿಂದೆ ಪೀಠಾಧ್ಯಕ್ಷರಾಗಿದ್ದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅನಾರೋಗ್ಯದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಜುಲೈ 15, 2020 ರಂದು ಲಿಂಗೈಕ್ಯರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
– ಮೃತ್ಯುಂಜಯ ಪಾಟೀಲ್