ರಾಣೇಬೆನ್ನೂರು, ಮೇ 5- ಬ್ಯಾಡಗಿಯಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿದ್ದವರನ್ನು ಹುಡುಕಿ 755 ಮೊಕದ್ದಮೆಗಳನ್ನು ದಾಖಲಿಸಿ, 148 ವರ್ತಕರ ಲೈಸೆನ್ಸ್ ರದ್ದುಪಡಿಸಿದ್ದು, 14 ಸಾವಿರ ಕ್ವಿಂಟಾಲ್ ಕಳಪೆ ಬೀಜಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಅವರು ರಾಣೇಬೆನ್ನೂರಿನಲ್ಲಿ ಕೃಷಿ ಮೂಲಭೂತ ಸೌಕರ್ಯ ಯೋಜನೆಯ ಉಪ ಕೃಷಿ ನಿರ್ದೇಶಕರ ಕಛೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕಳಪೆ ಬೀಜ, ಔಷಧಿ ಹಾಗೂ ಗೊಬ್ಬರಗಳ ಮಾರಾಟದಲ್ಲಿ ರೈತರಿಗೆ ಮೋಸ ಮಾಡುವ ವರ್ತಕ ಎಷ್ಟೇ ಪ್ರತಿಷ್ಠಿತನಿರಲಿ ಅವರ ಜೊತೆ ರಾಜೀ ಇಲ್ಲ. ಒಂದಿಲ್ಲೊಂದು ಕಾರಣಗಳಿಂದ ನಿರಂತರ ಸಂಕಷ್ಟದಲ್ಲಿರುವ ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲುತ್ತದೆ ಎಂದು ಸಚಿವ ಪಾಟೀಲ ಹೇಳಿದರು.
ವಿವಿಧ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹಳಷ್ಟು ಸಬ್ಸಿಡಿಗಳನ್ನು ಕೊಡುತ್ತಿದೆ ಎಂದು ವಿವರಿಸಿದ ಸಚಿವರು, ಪದವಿ ಕಾಲೇಜುಗಳಲ್ಲಿ ಶೇ. 50ರಷ್ಟು ರೈತರ ಮಕ್ಕಳಿಗೆ ಮೀಸಲಾತಿ ಕಲ್ಪಿಸಿದೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕೋಳಿ, ಕುರಿ ಮತ್ತು ಜೇನು ಮುಂತಾದ ಉಪ ಕಸುಬುಗಳನ್ನು ಮಾಡಿಕೊಂಡು ತಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಕರೆ ನೀಡಿದರು.
ನಾನು ಕೇಳುವ ಮೊದಲೇ ನನ್ನ ಕ್ಷೇತ್ರಕ್ಕೆ ಅವಶ್ಯವಿರುವುದೆಲ್ಲವನ್ನು ಕೊಡುತ್ತಿರುವ ಸಚಿವರು ನಮ್ಮ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಹೆಚ್ಚುತ್ತಿದ್ದ ಕಾರಣ ರಾಣೇಬೆನ್ನೂರು ತಾಲ್ಲೂಕನ್ನು ಮಲೆನಾಡು ಅಭಿವೃದ್ಧಿ ವ್ಯಾಪ್ತಿಗೆ ಸೇರಿಸಬೇಕು ಹಾಗೂ ತಮ್ಮ ತಾಲ್ಲೂಕಿನಲ್ಲಿ ಕೊಟ್ಟ ಆಕಳುಗಳನ್ನೂ ಸಹ ನನ್ನ ವಿಧಾನಸಭಾ ಕ್ಷೇತ್ರಕ್ಕೂ ಕೊಡುವಂತೆ ಶಾಸಕ ಅರುಣಕುಮಾರ ಪೂಜಾರ ಸಚಿವರನ್ನು ಒತ್ತಾಯಿಸಿದರು.
15 ಜಿಲ್ಲೆಗಳಲ್ಲಿ ಮಾಡಿ ಅದರ ಸದುಪಯೋಗದ ತಿಳುವಳಿಕೆಯನ್ನು ರೈತರಲ್ಲಿ ಮೂಡಿಸಲು ರೈತರೊಂದಿಗೆ ಒಂದು ದಿನದ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯಲ್ಲಿ ಮಾಡುವಂತೆ ಕೃಷಿ ನಿರ್ದೇಶಕರಾದ ನಂದಿನಿಕುಮಾರಿ ಸಚಿವರಿಗೆ ಮನವಿ ಮಾಡಿ ರೈತರು ವ್ಯವಸಾಯ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ತಮ್ಮ ಅಭಿವೃದ್ಧಿ ಮಾಡಿಕೊಳ್ಳುವಂತೆ ತಿಳಿಸಿದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೈತ ಸಂಘದ ಅಧ್ಯಕ್ಷ ಈರಣ್ಣ ಹಲಗೇರಿ, ವರ್ತಕ ಬಸವರಾಜ ಪಾಟೀಲ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜಂಟಿ ನಿರ್ದೇಶಕ ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪ ನಿರ್ದೇಶಕಿ ಜಿ.ಎಸ್. ಸ್ಪೂರ್ತಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಹಿತೇಂದ್ರಗೌಡಪ್ಪಳವರ ವಂದಿಸಿದರು.