ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ ಅಭಿಮತ
ದಾವಣಗೆರೆ, ಮೇ 5- ಹನ್ನೆರಡನೇ ಶತಮಾನದ ಶರಣರ ಕ್ರಾಂತಿ ವಿಶ್ವ ಭೂಪಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಅಂಶವಾಗಿದೆ ಹಾಗೂ ಸಮಾಜದ ಕೈಗನ್ನಡಿಯಾಗಿದೆ. ಬಸವಣ್ಣನವರ ಆದರ್ಶಗಳು, ತತ್ವಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ತಿಳಿಸಿದರು.
ಆವರಗೆರೆಯ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ, ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಶರಣರು ವಚನ ಸಾಹಿತ್ಯದ ಮೂಲಕ ಶ್ರೀ ಬಸವಣ್ಣನವರ ನಾಯಕತ್ವದಲ್ಲಿ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಅನುಭವ ಮಂಟಪದ ಮೂಲಕ ಅಕ್ಷರ ಲೋಕದಿಂದ ದೂರ ಇದ್ದ ಜನರನ್ನು, ಅಕ್ಷರಸ್ಥರನ್ನಾಗಿ ಮಾಡಿದರು. ಕುಲ ಕಸುಬುಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಮಾನವ ಕುಲ ಒಂದೇ ಎಂದು ಸಾರಿ ನಾವೆಲ್ಲರೂ ಸಹೋದರರಂತೆ ಬದುಕುವ ದಾರಿ ತೋರಿದರು.
ಶೋಷಿತ ಜನರನ್ನು ಮೇಲಕ್ಕೆತ್ತಿ ಸಮ ಸಮಾಜ ಸ್ಥಾಪಿಸಲು ಸಣ್ಣ ಜಾತಿಗಳಿಗೂ ಪ್ರಾತಿನಿಧ್ಯ ನೀಡಿ, ಗೌರವಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಬಸವಣ್ಣ ತನ್ನ ಸುತ್ತಲಿನ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸಿ ಮೌಢ್ಯ, ಕಂದಾಚಾರ, ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ಪುರುಷ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಶ್ರೀ ಬಸವೇಶ್ವರ ವಿಜ್ಞಾನ ಪಿ.ಯು ಕಾಲೇಜಿನ ಪ್ರಾಚಾರ್ಯರು ಮಾತನಾಡಿ, ಬಸವಾದಿ ಶರಣರ ನಡೆ-ನುಡಿಗಳು ಒಂದಾಗಿದ್ದು, ಸಮ ಸಮಾಜ ಕಟ್ಟುವ ಕನಸನ್ನು ಹೊತ್ತು, ಅದನ್ನು ಸಾಕಾರಗೊಳಿಸಲು ಬಸವಣ್ಣನವರ ನೇತೃತ್ವದಲ್ಲಿ ಹಗಲಿರುಳು ದುಡಿದು ಯಶಸ್ಸನ್ನು ಕಂಡರು. ಇಂದಿನ ಯುವ ಪೀಳಿಗೆ ವಚನಗಳ ಸಾರ ತಿಳಿದು, ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಜಯ್ಯಮ್ಮ ಗೋಪಿನಾಥ್ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ 20 ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಕಾಯಕಯೋಗಿ ಬಸವ ಪರಿಸರ ವೇದಿಕೆ ಅಧ್ಯಕ್ಷ ನಾಯಕನಹಟ್ಟಿ ರುದ್ರಪ್ಪ ವಹಿಸಿದ್ದರು. ಕೆ.ಪಾಪಯ್ಯ ಮತ್ತು ಸಂಗಡಿಗರ ಭಜನಾ ಮಂಡಳಿಯವರು ಪ್ರಾರ್ಥನೆ ನೆರವೇರಿಸಿದರು. ಕೆ.ರಾಜು ಸ್ವಾಗತಿಸಿ, ಕೆ.ಬಾಲಪ್ಪ ನಿರೂಪಿಸಿದರು. ಬಿ.ಮಹಾಂತೇಶ್ ವಂದಿಸಿದರು.
ಶಾಮಿಯಾನ ವೀರೇಶ್, ವ್ಯವಸಾಯ ಪತ್ತಿನ ಸಹಕಾರ ಸಂಘದ ಸದಸ್ಯ ತಿಪ್ಪೇಶ್, ಪರಿಸರ ವೇದಿಕೆಯ ಮಲ್ಲಿಕಾರ್ಜುನ, ನಾಯಕನಹಟ್ಟಿ ತಿಪ್ಪೇಶ್, ಸುರೇಶ್, ಮರಿಕುಂಟೆ ರುದ್ರೇಶ್, ಸುರೇಶ್ ಚೌಧರಿ, ಡ್ರೈವರ್ ಮಂಜುನಾಥ್, ಬಾರಿಕರ ಶೇಖರಪ್ಪ ಮತ್ತು ಇತರರು ಉಪಸ್ಥಿತರಿದ್ದರು.