ಹರಪನಹಳ್ಳಿ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಕಳಕಳಿ
ಹರಪನಹಳ್ಳಿ, ಏ.4- ಶ್ರೀಗಂಧದ ಗಿಡಗಳನ್ನು ಬೆಳೆಸುವ ಮೂಲಕ ನಾಡನ್ನು ಶ್ರೀಮಂತ ಗೊಳಿಸುವುದರ ಜೊತೆಗೆ, ಹೆಚ್ಚು ಆಮ್ಲಜನಕ ಹೊಂದಿರುವ ಗಿಡಗಳನ್ನು ಹಾಕುವ ಮೂಲಕ ಭೂಮಿಯ ತಾಪಮಾನ ತಗ್ಗಿಸುವ ಕೆಲಸ ಮಾಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಹೇಳಿದರು
ಇಲ್ಲಿನ ಶ್ರೀ ತರಳಬಾಳು ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ್ ಸಿಂಧೂರಾಣಿ ವಿವಾಹ ಸಂದರ್ಭದ ಸವಿನೆನಪಿಗಾಗಿ ಕಲ್ಯಾಣ ಮಂಟಪದ ಆವರಣದಲ್ಲಿ 108 ಶ್ರೀಗಂಧ, ಬಿದಿರಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾ ಡಿದರು.
ಕರ್ನಾಟಕ ರಾಜ್ಯ ಶ್ರೀಗಂಧಕ್ಕೆ ಹೆಸರು ವಾಸಿಯಾಗಿದ್ದು, ರಾಜ್ಯದ ರೈತರು ಪುನಃ ರಾಜ್ಯವನ್ನು ಗಂಧದ ನಾಡನ್ನಾಗಿಸುವ ಉದ್ದೇಶ ನಮ್ಮದಾಗಿದ್ದು, ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಶ್ರೀಗಂಧ ಮತ್ತು ವನಕೃಷಿ ಬೆಳೆಸಲಾಗುತ್ತಿತ್ತು, ಆದರೆ ಮರಗಳ್ಳರ ಪಾಲಾಗಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಮರಗಳನ್ನು ಕಾಣುವುದು ಕಡಿಮೆಯಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಹಲವಾರು ಕಡೆ ಇರುವ ಬರಡು ಭೂಮಿ, ಖಾಲಿ ಪ್ರದೇಶಗಳನ್ನು ಆಯ್ಕೆ ಮಾಡಿ ಕೊಂಡು ಶ್ರೀಗಂಧ ಮತ್ತು ವನಕೃಷಿ ಮಾಡುವ ಗುರಿಯನ್ನು ಸಂಘಟನೆ ಹೊಂದಿದ್ದು, ವಯಿಸ್ಕಾ ಇಂಟರ್ನ್ಯಾಷನಲ್ ಮೂಲಕ 62 ದೇಶಗಳಲ್ಲಿ ಆನಲೈನ್ ಪ್ರಚಾರ ಮಾಡಲಾ ಗುತ್ತಿದೆ. ಸರ್ಕಾರ ರೈತರಿಗೆ ಶ್ರೀಗಂಧ ಬೆಳೆಯಲು ಪ್ರೋತ್ಸಾ ಹಿಸಬೇಕು, ಪ್ರತಿಯೊಬ್ಬ ರೈತ ಶ್ರೀಗಂಧ, ವನಕೃಷಿ ಬೆಳೆ ಯಲು ಅನುಸರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ನಿವೃತ್ತ ಪೋಲಿಸ್ ವರಿಷ್ಠಾ ಧಿಕಾರಿ ಯು.ಶರಣಪ್ಪ ಮಾತನಾಡಿ, ಷಣ್ಮುಖಪ್ಪನವರ ಮಗನ ಮದುವೆಯಲ್ಲಿ ವಿನೂತನ ಕಾರ್ಯಕ್ರಮವಾಗಿ 108 ಬಿದಿರು, ಶ್ರೀಗಂಧ ಸಸಿಗಳನ್ನು ನೆಟ್ಟಿದ್ದು, ಪ್ರತಿಯೊಬ್ಬ ಸಾರ್ವಜನಿಕರು ಜಗತ್ತಿನ ತಾಪಮಾನ ಕಡಿಮೆ ಮಾಡಲು ಎಲ್ಲರೂ ಗಿಡ, ಮರಗಳನ್ನು ನೆಡಬೇಕು ಎಂದರು.
ಮಂಗಳ ನಿಧಿ ಅರ್ಪಣೆ : ಶ್ರೀನಿವಾಸ ಸಿಂಧೂರಾಣಿ ಅವರ ವಿವಾಹ ಸಂದರ್ಭದ ನೆನಪಿಗಾಗಿ 108 ಸಸಿಗಳನ್ನು ನೆಡುವುದರ ಜತೆಗೆ, ಮದುವೆಯ ಮಂಗಳ ಕಾರ್ಯಕ್ರಮದ ಪ್ರಯುಕ್ತ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಕೆಲಸಗಳಿಗಾಗಿ ಸದ್ವಿನಿಯೋಗ ಮಾಡಿಕೊಳ್ಳಲು ಷಣ್ಮುಖಪ್ಪ ದಂಪತಿ ಮಂಗಳ ನಿಧಿಯಾಗಿ 51 ಸಾವಿರ ರೂ.ಗಳ ಚೆಕ್ಕನ್ನು ಸಂಘದ ಅಧ್ಯಕ್ಷ, ಪದಾಧಿಕಾರಿಗಳಿಗೆ ನೀಡಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚೆಂದ್ರಶೇಖರಪ್ಪ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಕಾರ್ಯದರ್ಶಿ ಎ.ಎಸ್.ಈಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಸಂಚಾಲಕ ಟಿ.ಎನ್.ವಿಶುಕುಮಾರ್, ಶ್ರೀನಿವಾಸ ರೆಡ್ಡಿ, ಸಿಪಿಐ ಸತೀಶ್ ಎನ್. ಅರಸಿಕೇರಿ, ಕಲ್ಯಾಣ ಮಂಟಪದ ಅಧ್ಯಕ್ಷ ಕೆ.ಕುಬೇರಪ್ಪ, ನಿಂಬಲಗೇರಿ ಹೆಚ್.ಕೆ.ಕಲ್ಲೇಶಪ್ಪ, ಜಿಲ್ಲಾಧ್ಯಕ್ಷ ಕಡಬಗೇರಿ ಬಿ.ಪಿ.ಬಸವರಾಜ, ಉಪಾಧ್ಯಕ್ಷ ಹೊಸಪೇಟೆ ಬಸವರಾಜ ರೆಡ್ಡಿ, ತಾಲ್ಲೂಕು ಅಧ್ಯಕ್ಷ ಡಿ.ಭೀಮಣ್ಣ ಹುಣಿಸಿಕಟ್ಟಿ, ರೈತರಾದ ಗುರಿಕಾರ ನಾಗಪ್ಪ, ಕೆ.ಎಲ್.ಪಂಪಾಪತಿ, ಮಲ್ಲಿಕಾರ್ಜುನ, ಸುಧಾಕರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.