ಮಲೇಬೆನ್ನೂರು, ಏ. 3- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಥಮ ಪೀಠಾಧಿಪತಿಗಳಾಗಿದ್ದ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ ಯವರ 18 ನೇ ವರ್ಷದ ಪುಣ್ಯಸ್ಮರಣೆಯನ್ನು ಗುರುವಾರ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾಡಲಾಯಿತು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ನೀಡುವಂತೆ ಪ್ರಾರ್ಥಿಸಿದರು.
ನಂತರ ಮಾತನಾಡಿದ ಶ್ರೀಗಳು, ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ನಮ್ಮ ಸಮಾಜಕ್ಕೆ ದಾರಿದೀಪವಾಗಿದ್ದು, ಅವರು ಮಾಡಿದ ಹೋರಾಟ, ಶ್ರಮದ ಪ್ರತಿಫಲವಾಗಿ ವಾಲ್ಮೀಕಿ, ನಾಯಕ ಸಮಾಜಕ್ಕೆ ಸೌಲಭ್ಯಗಳ ಜೊತೆಗೆ ರಾಜಕೀಯ ಹಾಗೂ ಸಾಮಾಜಿಕ, ಶೈಕ್ಷಣಿಕ ಮನ್ನಣೆ ಸಿಕ್ಕಿದೆ. ಅವರು ಹಾಕಿ ಕೊಟ್ಟ ಹಾದಿಯಲ್ಲೇ ನಾವು ಮುನ್ನಡೆಯುತ್ತಿದ್ದು, ಸಮಾ ಜದ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕೆಂದು ಶ್ರೀಗಳು ಮನವಿ ಮಾಡಿದರು.
ಪುಣ್ಯಾನಂದ ಪುರಿ ಶ್ರೀಗಳ ತಾಯಿ ಮಹಾದೇವಮ್ಮ, ಸಹೋದರಿ ಕಲ್ಪನಾ, ಮಠದ ಧರ್ಮದರ್ಶಿಗಳಾದ ಹಾಸನದ ಮಹಾಂತೇಶ್, ನಲುವಾಗಲು ನಾಗರಾಜಪ್ಪ, ಹರಿಹರದ ಕೆ.ಬಿ.ಮಂಜುನಾಥ್, ರಾಣೇಬೆನ್ನೂರು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಚಂದ್ರಪ್ಪ ಬೇಡರ್, ಕರಿಬಸಪ್ಪ, ನಾಗಪ್ಪ ಸಣ್ಣಮನಿ, ಮಹಿಳಾ ಮುಖಂ ಡರಾದ ವಿಜಯಲಕ್ಷ್ಮಿ ಮಹೇಂದ್ರ ಕುಮಾರ್, ಪಾರ್ವತಿ ಬೋರಯ್ಯ, ಮಕರಿ ಪಾಲಾಕ್ಷಪ್ಪ, ರಾಜನಹಳ್ಳಿ ಭೀಮಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕುಂಬಳೂರು ವಾಸು, ಧನರಾಜ್ ಸೇರಿದಂತೆ ಬೈಲಹೊಂಗಲ, ರೋಣ, ನರಗುಂದ ಭಕ್ತರು ಭಾಗವಹಿಸಿದ್ದರು.