ಸಾಮಾಜಿಕ ಜವಾಬ್ದಾರಿ ಸುಸ್ಥಿರತೆ ಸಾಧಿಸುವ ಸಾಧನ

ಸಾಮಾಜಿಕ ಜವಾಬ್ದಾರಿ ಸುಸ್ಥಿರತೆ ಸಾಧಿಸುವ ಸಾಧನ

ಬಾಪೂಜಿ ವಿದ್ಯಾಸಂಸ್ಥೆಯ `ಮಿಸ್ ಪಾರ್ವತಿ’ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಮಾ. 23- ಮಹಿಳೆಯು ಸಾಧಿಸುವ ಮನೋಭಾವನೆ  ಮತ್ತು ಕುಟುಂಬದ ನಿರ್ವಹಣೆ ಜೊತೆಗೆ ಸಾಮಾಜಿಕ ಜವಾಬ್ದಾರಿ ಹೊಂದಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಸಾಮಾಜಿಕ ಜವಾಬ್ದಾರಿಯು ಸುಸ್ಥಿರತೆಯನ್ನು ಸಾಧಿಸುವ ಸಾಧನವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಿಐಇಟಿ ಕಾಲೇಜು ಆವರಣ ದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ಇಂದು ಹಮ್ಮಿಕೊಂಡಿದ್ದ `ಪಾರ್ವತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಹಿಳೆ ಕೂಡ ಜೀವನದಲ್ಲಿ ಆಸೆ, ಆಕಾಂಕ್ಷೆ, ಕನಸುಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರು ತ್ತಾಳೆ. ಇನ್ನೂ ಸಾಧಿಸಬೇಕೆಂಬ ಛಲ ಇದ್ದರೆ ಸಾಧನೆ ಸುಲಭವಾಗುತ್ತದೆ ಎಂದರು.

ಮಾರ್ಚ್ 8 ರಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಾಪೂಜಿ ವಿದ್ಯಾಸಂಸ್ಥೆಯ ವ್ಯಾಪ್ತಿಯ ಕಾಲೇಜುಗಳಲ್ಲಿ ಮಿಸ್ ಪಾರ್ವತಿ ಹೆಸರಿನಲ್ಲಿ ಕಲೋತ್ಸವ, ಕ್ರೀಡೋತ್ಸವ ಆಯೋಜನೆ ಮೂಲಕ ಮಹಿಳೆಯರಲ್ಲಿ ಹುದುಗಿರುವ ಪ್ರತಿಭೆ ಹೊರ ಹಾಕಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಹಬ್ಬದ ವಾತಾವರಣದಂತೆ ಕಾರ್ಯಕ್ರಮಗಳು ನಡೆದಿವೆ. ಬಾಪೂಜಿ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಮಹಿಳೆಯರನ್ನು ಒಂದೆಡೆ ಸೇರಿಸಿ, ಅವರಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ, ಉತ್ಸಾಹ, ಹುಮ್ಮಸ್ಸು ಮೂಡಿಸುವ ಉದ್ದೇಶ ಇದಾಗಿದೆ ಎಂದು ಹೇಳಿದರು.

ಪ್ರತಿ ಮಹಿಳೆ ಕೂಡ ಹಂತ ಹಂತವಾಗಿ ಪ್ರಗತಿಯತ್ತ ದಾಪುಗಾಲು ಹಾಕಬೇಕಾಗಿದೆ. ಕಲಿಕೆ ನಿರಂತರ. ನಿತ್ಯ ಬರುವ ಸವಾಲುಗಳನ್ನು ಎದುರಿಸುವ ಮನೋಭಾವನೆ ಮುಖ್ಯ ಎಂದರು.

ಸಮಾಜದಲ್ಲಿ ಎದುರಾಗುವ ಸವಾಲು ಗಳನ್ನು ಸಮರ್ಪಕವಾಗಿ ನಿಭಾಯಿಸಿದಾಗ ನಮ್ಮಲ್ಲಿರುವ ಶಕ್ತಿ ಮತ್ತು ಗುರಿ ಸ್ಪಷ್ಟವಾಗಿ ಸಿಗುತ್ತದೆ. ಹುಟ್ಟಿನಿಂದ ಯಾರೂ ಸಹ ಪ್ರತಿಭಾವಂತರಾಗಿರುವುದಿಲ್ಲ. ಶಿಕ್ಷಣದಿಂದ ಮತ್ತು ಸಮಾಜ ಕಲಿಸುವ ಪಾಠಗಳಿಂದ ಪರಿಪಕ್ವವಾಗಲು ಸಾಧ್ಯ ಎಂದು ಹೇಳಿದರು.

ಕಾರ್ಪೊರೇಟ್ ಟ್ರೈನರ್ ಪ್ರೀಜಾ ಶ್ರೀಧರ್ ಮಾತನಾಡಿ, ನಮ್ಮಲ್ಲಿಯೇ ಅಡಗಿರುವ `ಪಾರ್ವತಿ’ ಎಂಬ ಶಕ್ತಿ ಸ್ವರೂಪಿಣಿಯನ್ನು ಹೊರತರುವ ಕೆಲಸ ಮಾಡಬೇಕಾಗಿದೆ. ಪಾರ್ವತಿ ಎಂದರೆ ಶಕ್ತಿ, ಅದೊಂದು ದೈವೀ ಸ್ವರೂಪ, ಅದನ್ನು ಹೊರತರಲು ನಮ್ಮಿಂದ ಮಾತ್ರ ಸಾಧ್ಯ ಎಂದರು.

ಮಹಿಳೆಯರಲ್ಲಿ ಭಯ ಇರಬಾರದು. ಎಲ್ಲಾ ಸವಾಲುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬು ದನ್ನು ಸಾಧಕ ಮಹಿಳೆಯರನ್ನು ಉದಾಹರಿಸಿದ ಅವರು, ಮತ್ತೊಬ್ಬರನ್ನು ದೂರುವ ಬದಲು ಆತ್ಮವಿಶ್ವಾಸದಿಂದ ಮುನ್ನಡೆಯುವುದು ಮುಖ್ಯ ಎಂದು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ, ಸಂಸ್ಥೆಯ ಎಲ್ಲಾ ಮಹಿಳೆಯರನ್ನು ಮಿಸ್ ಪಾರ್ವತಿ ಕಾರ್ಯಕ್ರಮದ ಮೂಲಕ ಒಂದೆಡೆ ಸೇರಿಸಿ, ಅವರಲ್ಲಿರುವ ಪ್ರತಿಭೆ ಹೊರ ತಂದು, ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಸಂಸದೆ ಡಾ.ಪ್ರಭಾ ಅವರು ಮಾಡಿದ್ದಾರೆ. ಮಹಿಳೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಶುಕ್ಲಾ ಶೆಟ್ಟಿ, ಎಸ್‌ಎಸ್‌ಐಎಂಎಸ್ ಅಂಡ್ ಆರ್‌ಸಿ ಉಪ ಪ್ರಾಚಾರ್ಯರಾದ ಡಾ. ಶಶಿಕಲಾ ಪಿ.ಕೃಷ್ಣಮೂರ್ತಿ, ಬಿಐಇಟಿ ಪ್ರಾಧ್ಯಾಪಕರಾದ
ಡಾ. ಹೆಚ್.ಪಿ.ವಿನುತಾ, ಬಾಪೂಜಿ ಆಂಗ್ಲ ಮಾಧ್ಯಮ ಹೈಯರ್ ಪ್ರೈಮರಿ ಸ್ಕೂಲ್ ಪ್ರಾಚಾರ್ಯರಾದ ಜೆ.ಎಸ್. ವನಿತಾ, ಎವಿಕೆ ಕಾಲೇಜಿನ ಪ್ರಾಚಾರ್ಯರಾದ ಕಮಲಾ ಸೊಪ್ಪಿನ, ಡಿಆರ್‌ಎಂ ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ. ರೂಪಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಬಾಪೂಜಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು.

error: Content is protected !!