2025-26 ನೇ ಆಯವ್ಯಯ ಮಂಡನೆ : 3.58 ಲಕ್ಷ ರೂ. ಉಳಿತಾಯ
ಮಲೇಬೆನ್ನೂರು, ಮಾ.27- ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ವಿವಿಧ ಮೂಲಗಳಿಂದ 22 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ 21.96 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಪುರಸಭೆ ಅಧ್ಯಕ್ಷ ಹನುಮಂತಪ್ಪ ಹೇಳಿದರು.
ನಿರೀಕ್ಷಿತ ಆದಾಯದಲ್ಲಿ ಎಲ್ಲಾ ವೆಚ್ಚಗಳನ್ನು ತೆಗೆದು ಸುಮಾರು 3.58 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸುವುದಾಗಿ ಅವರು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್ ಅವರು, ಆಯವ್ಯಯ ಅಂಕಿ-ಅಂಶಗಳನ್ನು ತಿಳಿಸಿ, ಪಟ್ಟಣದ ರಸ್ತೆಗಳ ಅಭಿವೃದ್ಧಿ ಮತ್ತು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪುರಸಭೆ ಬದ್ಧವಾಗಿದೆ ಎಂದರು.
ಪಟ್ಟಣವನ್ನು ಕಚ್ಚಾ ರಸ್ತೆಗಳಿಂದ ಮುಕ್ತವಾಗಿಸಿ, ಸಿಸಿ ರಸ್ತೆ, ಬಾಕ್ಸ್ ಚರಂಡಿ, ಡಕ್‌ಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಪಟ್ಟಣದ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಿ, ರಸ್ತೆಗಳಿಗೆ ಸ್ಥಳೀಯ ಸಾಧಕರ ಹೆಸರಿಡಲು ಕ್ರಮವಹಿಸಲಾಗುವುದು.
ಕಂದಾಯ ವಸೂಲಾತಿ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ವಿಶೇಷ ಒತ್ತು ನೀಡುವುದರ ಜೊತೆಗೆ ಪಟ್ಟಣದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಿ, ಎರೆಹುಳು ಗೊಬ್ಬರ ತಯಾರು ಮಾಡಿ, ಅದರ ಮಾರಾಟದಿಂದ ಪುರಸಭೆ ನಿಧಿಗೆ ಹೆಚ್ಚಿನ ಆದಾಯ ತರುವ ಉದ್ದೇಶ ಹೊಂದಿದ್ದೇವೆ.
ವಸತಿ ಹಾಗೂ ನಿವೇಶನ ನಿರಾಶ್ರಿತರನ್ನು ಗುರುತಿಸಿ, ಅಗತ್ಯ ವಸತಿ ಮತ್ತು ನಿವೇಶನ ಒದಗಿಸಲು ಶ್ರಮವಹಿಸಲಿದ್ದು, ಎಲ್ಲಾ ಸಮುದಾ ಯಗಳ ಹಾಗೂ ಸಾರ್ವಜನಿಕ ರುದ್ರಭೂಮಿಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ನಿಗಾ ವಹಿಸಲಾಗುವುದು.
ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆ ವತಿಯಿಂದ ಸಾಲ ಸೌಲಭ್ಯ ಮತ್ತು ಡೇ-ನಲ್ಮ್ ಯೋಜನೆಯಡಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್ ಸಭೆಗೆ ತಿಳಿಸಿದರು.
ಆಡಳಿತ ಪಕ್ಷದ ಸದಸ್ಯ ನಯಾಜ್ ಅವರು, ಬಜೆಟ್‌ನಲ್ಲಿ ತಯಾರು ಮಾಡಿರುವ ಅಂಶಗಳನ್ನು ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಮಿನಿ ಸದಸ್ಯ ಬಿ.ವೀರಯ್ಯ ಅವರು, ಪುರಸಭೆಗೆ ಆದಾಯ ಇಲ್ಲದ ವಿಷಯಗಳ್ನು ಅಂದಾಜು ಪಟ್ಟಿಯಲ್ಲಿ ಸೇರಿಸಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಾಗ, ಅದನ್ನು ಸರಿಪಡಿಸಿಕೊಳ್ಳುವುದಾಗಿ ಮುಖ್ಯಾಧಿಕಾರಿ ಭಜಕ್ಕನವರ್ ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್, ಸದಸ್ಯರಾದ ಗೌಡ್ರ ಮಂಜಣ್ಣ, ಭೋವಿ ಶಿವು, ಸಾಬೀರ್, ಖಲೀಲ್, ದಾದಾಪೀರ್, ಷಾ ಅಬ್ರಾರ್, ಕೆ.ಜಿ.ಲೋಕೇಶ್, ಶ್ರೀಮತಿ ಮಂಜುಳಾ ಭೋವಿಕುಮಾರ್, ಶಬ್ಬೀರ್ ಖಾನ್, ನಾಮಿನಿ ಸದಸ್ಯ ಎ.ಆರೀಫ್ ಅಲಿ ಮಾತನಾಡಿ, ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.
ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಶ್ರೀಮತಿ ಸುಧಾ ಪಿ.ಆರ್.ರಾಜು, ಶ್ರೀಮತಿ ಅಕ್ಕಮ್ಮ ಬಿ.ಸುರೇಶ್, ಶ್ರೀಮತಿ ಮೀನಾಕ್ಷಮ್ಮ ಜಿಗಳೇರ ಹಾಲೇಶಪ್ಪ, ಶ್ರೀಮತಿ ಸುಲೋಚನಮ್ಮ ಓ.ಜಿ.ಕುಮಾರ್, ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ, ಶ್ರೀಮತಿ ನಾಜೀಮಾ ಬಾನು ಜಮೀರ್ ಸಾಬ್, ಶ್ರೀಮತಿ ತಹಸೀನಾ ಬಾನು ಯುಸೂಫ್ ಖಾನ್, ಶ್ರೀಮತಿ ನಗೀನಾ ಬಾನು ಅನ್ವರ್ ಸಾಬ್, ಶ್ರೀಮತಿ ಸುಮಯ್ಯಬಾನು ಎಂ.ಬಿ.ರುಸ್ತುಂ, ನಾಮಿನಿ ಸದಸ್ಯ ಎಕ್ಕೆಗೊಂದಿ ಕರಿಯಪ್ಪ, ಮುಖ್ಯಾಧಿಕಾರಿ ಭಜಕ್ಕನವರ್, ಅಧಿಕಾರಿಗಳಾದ ದಿನಕರ್, ಉಮೇಶ್, ಶಿವರಾಜ್, ರಾಘವೇಂದ್ರ, ಕಟ್ಟಿಮನಿ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.
ಅಧಿಕಾರಿ ಅವಿನಾಶ್ ಅವರು, ಬಜೆಟ್ ಆಯವ್ಯಯದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ವಿವರವನ್ನು ಸಭೆಗೆ ಓದಿ ತಿಳಿಸಿದರು.