ಹರಿಹರ, ಮಾ.27- ನಗರಸಭೆಯು 2025-26ನೇ ಸಾಲಿಗೆ 5.40 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ನಗರಸಭೆಯ ಸ್ವಂತ ಆದಾಯದಿಂದ 59.25 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ತಿಳಿಸಿದರು.
ನಗರಸಭೆಯ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನಾ ಸಭೆಯಲ್ಲಿ ಮಾತನಾಡಿದ ಅವರು, ನಿರೀಕ್ಷಿತ ಆದಾಯ ಮತ್ತು ಪ್ರಮುಖ ಖರ್ಚುಗಳ ವಿವರಗಳನ್ನು ನೀಡಿದ ಅವರು ಸಾರ್ವಜನಿಕರು, ಮಾಧ್ಯಮದವರು ಹಾಗೂ ಸದಸ್ಯರಿಂದ ಬಂದ ಸಲಹೆಗಳನ್ನು ಪರಿಗಣಿಸಿ ಈ ಬಜೆಟ್ ರೂಪಿಸಲಾಗಿದೆ ಎಂದು ಕವಿತಾ ಬೇಡರ್ ತಿಳಿಸಿದರು.
ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಬಜೆಟ್ ಉತ್ತಮವಾಗಿದ್ದರೂ ನಗರದಲ್ಲಿ ಬಾಕಿ ಇರುವ ಕಾಮಗಾರಿ ಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಬರಹಗಳು, ಮೂಲಭೂತ ಸೌಕರ್ಯಗಳು ಮತ್ತು ಕಸ ವಿಲೇವಾರಿ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಬಜೆಟ್ ಸಭೆಯಲ್ಲಿ ನಡೆದದ್ದು..
ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಂಡಿರುವ ಹರಿಹರ ನಗರಸಭೆಯ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ತಿಳಿಸಿದರು.
ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆ, ಹಿಂದಿನ ಬಾಕಿ ಬಿಲ್ಗಳಿಗಾಗಿ ಸಾಗರ್ ಫೋಟೋಗ್ರಾಫರ್ ವಿರೋಧ ವ್ಯಕ್ತಪಡಿಸಿದರು. ಹಿರಿಯ ಸದಸ್ಯರ ಸಮಾಧಾನದ ನಂತರ ಬಜೆಟ್ ಮಂಡನೆಗೆ ಅವಕಾಶ ಸಿಕ್ಕಿತು.
ಬಜೆಟ್ ನಿರಾಶಾದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದ ಸದಸ್ಯ ದಾದಾ ಖಲಂದರ್.
ಸದಸ್ಯ ದಾದಾ ಖಲಂದರ್ ಮಾತನಾಡಿ, ಇದು ಹಳೆಯ ಬಜೆಟ್‌ನ ನಕಲು ಎಂದು ಆರೋಪಿಸಿ, ಹೊಸ ಯೋಜನೆಗಳಿಲ್ಲದಿರುವು ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದಿಂದ ಬಂದ ಅನುದಾನವನ್ನು ಬಳಸದಿರುವುದನ್ನು ಖಂಡಿಸಿ, ಇದು ನಿರಾಶಾದಾಯಕ ಬಜೆಟ್ ಎಂದು ಹೇಳಿ ಸಭೆಯಿಂದ ಹೊರ ನಡೆದರು.
ಸದಸ್ಯ ಎ. ವಾಮನಮೂರ್ತಿ, ಬಜೆಟ್ ಮಂಡನೆಯ ಮಹತ್ವವನ್ನು ತಿಳಿಸಿ, ಸದಸ್ಯರು ಜವಾಬ್ದಾರಿಯಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
ಸದಸ್ಯ ವಸಂತ್, ಬಜೆಟ್ ವಿರೋಧಕ್ಕೆ ಕಾರಣಗಳನ್ನು ಚಿಂತಿಸಬೇಕು ಎಂದರು. ಆದಾಯ ಹೆಚ್ಚಿಸಲು ಮಳಿಗೆಗಳ ನಿರ್ಮಾಣ ದಂತಹ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸರ್ಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸದಸ್ಯೆ ಅಶ್ವಿನಿ ಕೃಷ್ಣ, ತಮ್ಮ ವಾರ್ಡಿನ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಕೇವಲ ಬಜೆಟ್ ಮಂಡನೆ ಮಾಡದೆ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿದರು. ಆರೋಗ್ಯ ಅಧಿಕಾರಿ ರವಿಪ್ರಕಾಶ್ ಅವರು ಕಸ ಸಾಗಿಸಲು ಹೊಸ ವಾಹನಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಸದಸ್ಯರು, ಅಧಿಕಾರಿಗಳು ಇದ್ದರು.