ಭಕ್ತರ ನೆಚ್ಚಿನ ತಾಣ ಸಿದ್ದಾರೂಢರ ಮಠ ಅತ್ಯಂತ ಶ್ರೇಷ್ಠ ಮಠ

ಭಕ್ತರ ನೆಚ್ಚಿನ ತಾಣ ಸಿದ್ದಾರೂಢರ ಮಠ ಅತ್ಯಂತ ಶ್ರೇಷ್ಠ ಮಠ

ಯಲವಟ್ಟಿ : ಲಿಂಗೈಕ್ಯ ಶ್ರೀಗಳ ಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ 

ಮಲೇಬೆನ್ನೂರು, ಮಾ.20- ದೇಶದ ಎಲ್ಲಾ ಮಠಗಳಿಗಿಂತ ಹುಬ್ಬಳ್ಳಿಯ ಸಿದ್ದಾರೂಢರ ಮಠ ಅತ್ಯಂತ ಶ್ರೇಷ್ಠ ಮಠವಾಗಿದ್ದು, ಭಕ್ತರ ನೆಚ್ಚಿನ ಮತ್ತು ಭಕ್ತಿಯ ತಾಣವಾಗಿದೆ ಎಂದು ಚಿತ್ರದುರ್ಗದ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಬಣ್ಣಿಸಿದರು.

ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ದಾಶ್ರಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ `ಕಾಯ ವಿಡಿದಾತ್ಮ ರಾಶಿಗೆ ಹಿತವಾವುದಿಹ ಪರದೊಳು ಧರ್ಮರತಿ’ ವಿಷಯ ಕುರಿತು ಪ್ರವಚನ ನೀಡಿದರು.

ಸಿದ್ದಾರೂಢರು ಶಿವನ ಅವತಾರವಾಗಿದ್ದು, ಅವರ ಹೆಸರಿನ ಸಾವಿರಾರು ಆಶ್ರಮಗಳು ನಾಡಿನಲ್ಲಿವೆ. ಅವುಗಳಲ್ಲಿ ಸೇವೆ ಮಾಡಲು ಸ್ವಾಮೀಜಿಗಳು ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿ ಆಗುವ ಮುನ್ನ ಮಠದ ಪಾಸ್ ಬುಕ್ ಮತ್ತು ಚೆಕ್ ಪವರ್ ಕೇಳುತ್ತಾರೆ. ಆದರೆ, ಶ್ರೀ ಶಿವಾನಂದರು ಜನರ ಕಲ್ಯಾಣಕ್ಕಾಗಿ ಯಲವಟ್ಟಿ ಮಠ ಕಟ್ಟಿದರು. ನಂತರ ಬಂದ ನಿತ್ಯಾನಂದರು ಹಣಕ್ಕಾಗಿ ತಲೆ ಕೆಡಿಸಿಕೊಳ್ಳದೇ ಭಕ್ತರ ಮನಸು ಕಟ್ಟುವ ಕೆಲಸ ಮಾಡಿದ್ದಾರೆ. ಯೋಗಾನಂದರೂ ಸಹ ಅವರ ಸ್ಮರಣೆಯಲ್ಲಿ ಈ ಮಠವನ್ನು ಭಕ್ತಿ ಮತ್ತು ಧರ್ಮದ ಹಾದಿಯಲ್ಲಿ ಬೆಳೆಸುತ್ತಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತ ಪಡಿಸಿದರು. 

ಭಕ್ತಿ, ಧರ್ಮ ನಮ್ಮ ಎಲ್ಲಾ ಪಾಪಗಳನ್ನು ತೊಳೆದು ಹಾಕುತ್ತವೆ. ಚಿತ್ತ ಶುದ್ದಿ, ಅಂತಃಕರಣ ಶುದ್ಧಿಯು ಧರ್ಮವಾಗುತ್ತದೆ.  ಧರ್ಮದಿಂದ ಪ್ರೀತಿ, ಆಚಾರ, ವಿಚಾರ, ಸತ್ಯ, ನ್ಯಾಯ, ನೀತಿಗಳು ಅನಾವರಣಗೊಳ್ಳುತ್ತವೆ ಎಂದು ಶಿವಲಿಂಗಾನಂದ ಸ್ವಾಮೀಜಿ ಹೇಳಿದರು. 

ಹದಡಿ ಚಂದ್ರಗಿರಿ ಸಂಸ್ಥಾನ ಮಠದ ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ, ಸಿದ್ದಾರೂಢರ ಸ್ಮರಣೆ ಮತ್ತು ಆಚರಣೆಯಿಂದ ಉಪಾಸನೆ ಆಗುತ್ತದೆ. ಧರ್ಮಕ್ಕೆ ಶಾಸ್ತ್ರಗಳಲ್ಲಿ 2000 ಲಕ್ಷಣಗಳಿವೆ. ಆದರೆ, ನಿಖರತೆ ಇಲ್ಲ. ಸತ್ಯದ ಮಾರ್ಗದಲ್ಲಿ ನಡೆಯುವುದೇ ಧರ್ಮ ಎಂಬುದೇ ಸತ್ಯ. ಸತ್ಯ, ನ್ಯಾಯ ಇದ್ದಲ್ಲಿ ಧರ್ಮ ಉದಯಿಸುತ್ತದೆ ಎಂದು ವರ್ಣಿಸಿದರು.

ಬಸವಾಪಟ್ಟಣದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಮನುಷ್ಯ ಸುಖವಾಗಿರಬೇ ಕೆಂದರೆ ನಾರಿ, ಧರಣಿ, ಬಲುಧನದ ಸಿರಿ ಸಾಕೆಂದು ತಿಳಿದಿದ್ದಾನೆ. ಅರಿವಿನ ಜೀವನಕ್ಕೆ ಸಿದ್ದಾರೂಢರ ಆಚರಣೆ ಬೇಕು. ಇಲ್ಲವಾದಲ್ಲಿ ನೋಡಲು ಒಂದೇ ತೆರನಾದ ಬೆಣ್ಣೆ ಉಂಡೆ ಬದಲು ತಿಳಿಸುಣ್ಣದ ಉಂಡೆಯನ್ನು ಸೇವಿಸಿ ನೋವುಪಡಬೇಕಾಗುತ್ತದೆ. ಸರಿಯಾದ ಜ್ಞಾನ ಇಂತಹ ಆಚರಣೆಗಳಿಂದ ಗೋಚರಿಸುತ್ತದೆ. ಅವರವರ ಪ್ರಾಮಾಣಿಕ ಸೇವೆಯೇ ಧರ್ಮವಾಗುತ್ತದೆ ಎಂದು ವಿಶ್ಲೇಷಿಸಿದರು.

ಅಧ್ಯಾತ್ಮ ಚಿಂತಕ ಸಿರಿಗೆರೆಯ ಡಿ. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವೈರಾಗ್ಯ ನಿಧಿ ಲಿಂಗೈಕ್ಯ ಶಿವಾನಂದ ಶ್ರೀಗಳ ಮತ್ತು ಜ್ಞಾನ ನಿಧಿ ನಿತ್ಯಾನಂದ ಶ್ರೀಗಳ ಪುಣ್ಯಾರಾಧನೆಯನ್ನು ಪ್ರತಿ ವರ್ಷ ಆಚರಣೆ ಮಾಡುವುದು ಶ್ರೀ ಯೋಗಾನಂದ ಶ್ರೀಗಳ ಸದೀಚ್ಚೆಯಾಗಿದೆ. ನಮ್ಮ ಹಿರಿಯರನ್ನು ಸ್ಮರಿಸುವುದು, ಆರಾಧಿಸುವುದು ಸಿದ್ದಾರೂಢ ಸಂಪ್ರದಾಯವಾಗಿದೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಆಧುನಿಕ ಸಾಧನ ಸೌಲಭ್ಯಗಳಿಂದಾಗಿ ಅಧ್ಯಾತ್ಮದಿಂದ ನಾವು ವಿಮುಖರಾಗುತ್ತಿದ್ದೇವೆ ಎಂಬ ಆತಂಕ ವ್ಯಕ್ತಪಡಿಸಿದರು. 

ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್ ಮಾತ ನಾಡಿ, ಸತ್ಯ ಮತ್ತು ನ್ಯಾಯದ ಸಮೀಕರಣವೇ ಧರ್ಮವಾಗಿದ್ದು, ಸದಾಚಾರದಿಂದ ಕಲಹಗಳು ದೂರವಾಗಿ ಸಾಮರಸ್ಯದ ಬದುಕನ್ನು ಧರ್ಮ ತಿಳಿಸುತ್ತದೆ. ಹೃದಯವಂತಿಕೆ ಮತ್ತು ಮಾನವೀಯತೆಯ ಬುದ್ದಿವಂತರು ನಮ್ಮ ದೇಶಕ್ಕೆ ಬೇಕು ಎಂದು ಮಂಜುನಾಥ್ ಹೇಳಿದರು. 

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಯಲವಟ್ಟಿ ಮಠ ವಿಶಿಷ್ಟ ಸಂಪ್ರದಾಯ ಹೊಂದಿದೆ. ಪ್ರತಿ ತಿಂಗಳು ಸತ್ಸಂಗ ಕಾರ್ಯಕ್ರಮದ ಮೂಲಕ ಈ ಭಾಗದ ಜನರ ಮನೆಗಳಲ್ಲಿ ಸದಾಚಾರ ಬಿತ್ತುವ ಧರ್ಮ ಕಾರ್ಯ ಮಾಡುತ್ತದೆ ಎಂದು ಶ್ಲ್ಯಾಘಿಸಿದರು.

ಹುಬ್ಬಳ್ಳಿಯ ಸಿದ್ದಾರೂಢ ಮಠದ ಧರ್ಮದರ್ಶಿ ಸಿದ್ದನಗೌಡ ಮಾತನಾಡಿ, ಜನರ ಕಣ್ಣಿಗೆ ಕಂಡ ದೇವರೆಂದರೆ ಸದ್ಗುರು ಸಿದ್ದಾರೂಢರು ಎಂದು ತಿಳಿಸಿದರು. ದಾವಣಗೆರೆಯ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶಿವಾನಂದ ಶ್ರೀಗಳು, ಹೋತನಹಳ್ಳಿ ಸಿದ್ದಾರೂಢ ಮಠದ ಶ್ರೀ ಶಂಕರಾನಂದ ಶ್ರೀಗಳು, ಚಿತ್ರಭಾನು ಕೋಟಿ ಮಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಸ್ವಾಭಿಮಾನಿ ಬಳಗದ ಸಂಸ್ಥಾಪಕ ಜಿ.ಬಿ.ವಿನಯಕುಮಾರ್, ಡಿ.ಯಲವಟ್ಟಿಯ, ಯೋಮಕೇ ಶ್ವರಪ್ಪ, ಹೆಚ್.ಹಳ್ಳಿಹಾಳ್, ವೀರನಗೌಡ ಮಾತನಾಡಿದರು. ಯಲವಟ್ಟಿ ಗುರುಸಿದ್ಧಾಶ್ರಮದ ಯೋಗಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಕುಂಬಳೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಉಮಾದೇವಿ ಶಿವರಾಮಚಂದ್ರಪ್ಪ, ಸಿರಿಗೆರೆ ಗ್ರಾ.ಪಂ ಅಧ್ಯಕ್ಷ ಬಂಡೇರ ಪ್ರಭು, ನಂದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿಗಳಿ ಗೌಡ್ರ ಬಸವರಾಜಪ್ಪ, ಉಪಾಧ್ಯಕ್ಷ ಆಂಜನೇಯ ಪಾಟೀಲ್, ತಾ. ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಹೆಚ್.ಟಿ.ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿಯ ಜಿ. ಆನಂದಪ್ಪ, ಬಿ.ಎಂ.ದೇವೇಂದ್ರಪ್ಪ, ಡಾ. ಎನ್.ಆರ್.ದಿನೇಶ್ ಕುಮಾರ್, ಗ್ರಾಮದ ಜಿ.ಅಂಜಿನಪ್ಪ, ಬಿ.ಸಿದ್ದೇಶ್, ಎ.ಸುರೇಶ್, ಅಜ್ಜನಾಯ್ಕ್, ವಕೀಲ ನಂದಿತಾವರೆ ತಿಮ್ಮನಗೌಡ, ಸಿರಿಗೆರೆಯ ಎಂ.ಈಶ್ವರಪ್ಪ, ಮಾಗೋಡ್ ರೇವಣಸಿದ್ದಪ್ಪ, ಕೃಷ್ಣಪ್ಪ, ಕುಂದೂರು ಮಂಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. 

ಕುಂಬಳೂರು ಕುಬೇರಪ್ಪ ಭಕ್ತಿ ಗೀತೆ ಹಾಡಿ ಪ್ರಾರ್ಥಿಸಿದರು. ಪತ್ರಕರ್ತ ಜಿಗಳಿ ಪ್ರಕಾಶ್ ಸ್ವಾಗತಿಸಿದರು. 

ಯಲವಟ್ಟಿ ಪಿಎಸಿಎಸ್ ಸಿಇಓ ಶೇಖರಪ್ಪ ಕಾರ್ಯಕ್ರಮ ನಿರೂಪಿಸಿದರು. ಸುಬೇದಾರ್ ಶಿವಕುಮಾರ್ ವಂದಿಸಿದರು. ಬಳಿಕ ಯೋಗಾನಂದ ಶ್ರೀಗಳ ಕಿರೀಟ ಪೂಜೆ ನಡೆಯಿತು. 

error: Content is protected !!