ಜಾನಪದ ಕಲೆಗಳು ಮುಕ್ತ ವಿಶ್ವವಿದ್ಯಾನಿಲಯಗಳಿದ್ದಂತೆ

ಜಾನಪದ ಕಲೆಗಳು ಮುಕ್ತ ವಿಶ್ವವಿದ್ಯಾನಿಲಯಗಳಿದ್ದಂತೆ

ಶಾಲಾ-ಕಾಲೇಜು ಅಂಗಳದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಕೆ.ಸಿ. ನಾಗರಜ್ಜಿ

ದಾವಣಗೆರೆ, ಮಾ.18- ಜಾನಪದ ಕಲೆಗಳು ಮುಕ್ತ ವಿಶ್ವವಿದ್ಯಾನಿಲಯಗಳಿದ್ದಂತೆ. ಅವುಗಳಿಂದ ತಿಳಿಯುವುದು ಹಾಗೂ ಪಡೆಯುವ ಅರಿವು ಅಪಾರವಿದೆ ಎಂದು ರಾಣೇಬೆನ್ನೂರಿನ ಜನಪದ ವಿದ್ವಾಂಸ ಡಾ.ಕೆ.ಸಿ. ನಾಗರಜ್ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ನಿನ್ನೆ ಆಯೋಜಿಸಿದ್ದ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಜಾನಪದ ಕಲೆಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಜಾನಪದ ಕಲೆಗಳು ಹೃದಯದಿಂದ ಹುಟ್ಟಿದಂತ ಕಲೆಗಳು. ಪರಸ್ಪರ ನೋವಿಗೆ ಸ್ಪಂದಿಸುವ, ಮನಸ್ಸಿಗೆ ಶಾಂತಿ, ನೆಮ್ಮದಿ ನೀ ಡುವ ಶಕ್ತಿಯನ್ನು ಪಡೆದಿವೆ. ಇಂತಹ ಕಲೆಗಳು ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರು ವುದು ಬೇಸರ ತಂದಿದೆ ಎಂದರು.

ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಮೂಲ ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವುಗಳನ್ನು ಪೋಷಿಸಬೇಕಿದೆ. ಮನುಷ್ಯನಿಗೆ ಸರಿಯಾದ ಸಂಸ್ಕಾರ ನೀಡುವಲ್ಲಿ ಈ ಕಲೆಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಹೇಳಿದರು.

ನೈತಿಕವಾಗಿ ನಮ್ಮನ್ನು ಶಕ್ತಿಶಾಲಿಗೊಳಿಸಿ ಸನ್ಮಾರ್ಗದಲ್ಲಿ ನಡೆಸುವ ಕಲೆಯೇ ಜಾನಪದ. ಇವು ಕೇವಲ ಮನರಂಜನೆ ನೀಡದೇ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುವ ಜತೆಗೆ ನಮ್ಮಲ್ಲಿ ಸೌಹಾರ್ದತೆ ರೂಢಿಸಲಿವೆ ಎಂದು ತಿಳಿಸಿದರು.

ಜಾನಪದ ಹಾಡುಗಳಾದ ಸೋಬಾನೆ, ಲಾಲಿಪದ, ಕೋಲಾಟ, ಒಡಪುಗಳು, ಒಗಟುಗಳು, ಗೀಗಿಪದ, ಲಾವಣಿಗಳು, ಡೊಳ್ಳು, ಕಂಸಾಳೆ, ವೀರಗಾಸೆ, ಪಟ ಕುಣಿತ, ಸೋಮನ ಕುಣಿತ, ಕರಗ ಸೇರಿದಂತೆ ಇನ್ನಿತರೆ ಕಲೆಗಳು ವಿಶೇಷವಾಗಿವೆ ಎಂದು ಹೇಳಿದರು.

ಕಸಾಪ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಮಾತನಾಡಿದರು. ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ಮಾತನಾಡಿದರು. 

ಈ ವೇಳೆ ಮಾಗನೂರು ಬಸಪ್ಪ ವಿದ್ಯಾ ಸಂಸ್ಥೆಯ ಆಡಳಿತಧಿಕಾರಿ ಎಸ್.ಆರ್. ಶಿರಗುಂಬಿ, ಎಸ್‌.ಎಸ್‌.ಎಂ.ಬಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ.ಎಂ. ಪ್ರೇಮ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕಸಾಪ ತಾಲ್ಲೂಕು ನಿರ್ದೇಶಕ ಕುರ್ಕಿ ಸಿದ್ದೇಶ್, ಜಾನಪದ ಕಲಾವಿದ ಗಣೇಶ ಗುಡಗುಡಿ ಇತರರು ಇದ್ದರು.

error: Content is protected !!