ರೆವಿನ್ಯೂ ನಿವೇಶನ ಸಕ್ರಮಗೊಳಿಸಲು ಆಗ್ರಹ

ರೆವಿನ್ಯೂ ನಿವೇಶನ ಸಕ್ರಮಗೊಳಿಸಲು ಆಗ್ರಹ

ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ

ದಾವಣಗೆರೆ,ಮಾ.18-  ಮಹಾನಗರ ಪಾಲಿಕೆಯ ಬಿಜೆಪಿ ಮಾಜಿ ಸದಸ್ಯರ ನಿಯೋಗವು, ಇಂದು ಬೆಂಗಳೂರಿನಲ್ಲಿ ನಗರಾಭಿವೃಧ್ಧಿ ಸಚಿವ  ಸುರೇಶ್ ಬಿ.ಎಸ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ವಿಧಾನ ಪರಿಷತ್ ಮುಖ್ಯ ಸಚೇತಕ  ರವಿಕುಮಾರ್, ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್,   ಮಾಜಿ ಮೇಯರ್ ಎಸ್.ಟಿ.ವೀರೇಶ್  ನೇತೃತ್ವದಲ್ಲಿ,  ಆರ್. ಶಿವಾನಂದ್, ಕೆ.ಎಂ. ವೀರೇಶ್ ಸೇರಿದಂತೆ ಪಾಲಿಕೆ  ಮಾಜಿ ಸದಸ್ಯರು ನಿಯೋಗದಲ್ಲಿದ್ದರು. 

ರೆವಿನ್ಯೂ ನಿವೇಶನಗಳನ್ನು ನಮೂನೆ-2ರಲ್ಲಿ ‘ಅಧಿಕೃತ’ ಎಂದು ನಮೂದಿಸಲು ಸಕ್ರಮಗೊಳಿಸ ಬೇಕು, ಬಿ-ಖಾತಾ ನಿವೇಶನಗಳಿಗೆ ಕಟ್ಟಡ ಪರ ವಾನಗಿ ನೀಡಬೇಕು ಮತ್ತು ನೀರಿನ ಕಂದಾಯ ಬಾಕಿ ಇದ್ದವರಿಗೂ  ಬಿ-ಖಾತೆ ನೀಡಬೇಕು, ಬ್ಯಾಂಕ್ ಲೋನ್ ನೀಡಲು ಅವಕಾಶ ಮಾಡಿ ಕೊಡಲು ಪರಿಷ್ಕೃತ ಆದೇಶ ಹೊರಡಿಸಬೇಕು. 

ರೆವಿನ್ಯೂ ನಿವೇಶನಗಳನ್ನು ‘ಬಿ’ ಖಾತಾ ರಿಜಿಸ್ಟರ್‌ನಲ್ಲಿ ನಮೂದಿಸಿ ‘ನಮೂನೆ-2ಎ’ ಅಥವಾ ‘ನಮೂನೆ-3ಎ’ ನೀಡುತ್ತಿದ್ದು, ಇದರಲ್ಲಿ ಸೊತ್ತಿನ ವರ್ಗೀಕರಣ ಕಾಲಂನಲ್ಲಿ ಅನಧಿಕೃತ ಎಂದು ನಮೂದಿಸಲಾಗುತ್ತಿದೆ. ಇದರಿಂದ ಈ ಆಸ್ತಿಗಳಿಗೆ ಕಟ್ಟಡ ಪರವಾನಿಗೆಯಾಗಲೀ, ಬ್ಯಾಂಕ್ ಲೋನ್‌ಗಳನ್ನಾಗಲೀ ನೀಡುವುದಿಲ್ಲ.

ಈಗ ದುಪ್ಪಟ್ಟು ತೆರಿಗೆ ಪಾವತಿಸಿ ‘ಬಿ’ ಖಾತಾ ನಮೂನೆ-2ಎ ಅಥವಾ ನಮೂನೆ-3ಎ ಪಡೆದ ನಿವೇಶನದಾರರಿಗೆ ಕಟ್ಟಡ ಪರವಾನಿಗೆ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಕಾರಣ ರಾಜ್ಯ ಸರ್ಕಾರದ ಆದೇಶದಲ್ಲಿ ಬಡವರಿಗೆ ನೆರವಾಗುವ ಬದಲು ರೆವಿನ್ಯೂ ನಿವೇಶನಗಳನ್ನು ಅನಧಿಕೃತ ಆಸ್ತಿಗಳನ್ನು ಪ್ರತ್ಯೇಕ ‘ಬಿ’ ರಿಜಿಸ್ಟರ್‌ನಲ್ಲಿ ನಮೂದಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮಾತ್ರ ತಿದ್ದುಪಡಿ ತಂದಿದ್ದು ಮತ್ತು ಅನಧಿಕೃತ ಆಸ್ತಿ ಎಂದು ಇ-ಖಾತಾ ನೀಡಿ ಆಸ್ತಿಯನ್ನು ಸಕ್ರಮಗೊಳಿಸದೇ ಇರುವುದು ಖಂಡನೀಯ.

ಈ ಕೂಡಲೇ ರಾಜ್ಯ ಸರ್ಕಾರ ನಮೂನೆ-2ಎ ಮತ್ತು ನಮೂನೆ-3ಎ ರಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ `ಅಧಿಕೃತ’  ಎಂದು ನಮೂದಿಸಬೇಕು ಮತ್ತು ಈ ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡಲು ಅಗತ್ಯ ತಿದ್ದುಪಡಿ ತರಬೇಕು, ಅದಲ್ಲದೇ ಬ್ಯಾಂಕ್‌ಗಳಿಗೆ ಮನೆ ಕಟ್ಟಲು ಸಾಲ ನೀಡಲು ಈ ನಿವೇಶನಗಳನ್ನು ಅಧಿಕೃತ ಎಂದು ಆದೇಶಿಸಬೇಕು.

ಬಡವರಿಗೆ ನೆರವಾಗುವ ದೃಷ್ಟಿಯಿಂದ, ಸರ್ಕಾರ ಈ  ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರನ್ನು ನಿಯೋಗ ಒತ್ತಾಯಿಸಿತು.   

error: Content is protected !!