15 ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳ

15 ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳ

50 ಕ್ಕೂ ಹೆಚ್ಚು ಕಂಪನಿಗಳು ಭಾಗಿ, 5000 ಕ್ಕೂ ಹೆಚ್ಚು ಹುದ್ದೆಗಳಿಗೆ ಆಯ್ಕೆ: ಜಿಲ್ಲಾಧಿಕಾರಿ

ದಾವಣಗೆರೆ, ಮಾ.11- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯಿಂದ ಇದೇ ಮಾ. 15 ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಐದು ಸಾವಿರಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು. 

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಕುರಿತು ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಬಾಪೂಜಿ ತಾಂತ್ರಿಕ ಮಹಾವಿ ದ್ಯಾಲಯ ಎರಡೂ ಕಡೆ  ಉದ್ಯೋಗ ಮೇಳ ನಡೆಯಲಿದೆ. ಬಿಐಟಿಯಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು ಐಟಐ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಆಯ್ಕೆ ನಡೆಯಲಿದೆ ಎಂದರು.  

ಬೃಹತ್ ಉದ್ಯೋಗ ಮೇಳದಲ್ಲಿ 50 ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸುತ್ತಿವೆ.   ಜಿಲ್ಲೆಯ ನಿರುದ್ಯೋಗಿಗಳಿಗೆ ಮೇಳ ವರದಾನವಾಗಿದೆ. ಮೇಳದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಂಪನಿಗಳು ಭಾಗವಹಿ ಸುತ್ತಿವೆ. ಜಿಲ್ಲೆಯ 1000 ಕ್ಕೂ ಹೆಚ್ಚಿನ ಯುವಕ, ಯುವತಿಯರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದು, ಎಲ್ಲಾ ದಾಖಲೆಗಳೊಂದಿಗೆ ನೇರ ವಾಗಿಯೂ ಭಾಗವಹಿಸಲು ಅವಕಾಶ ಇದೆ. ಆಗಮಿಸುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. 

ಜಿಲ್ಲೆಯಲ್ಲಿ 6 ಸಾವಿರಕ್ಕಿಂತಲೂ ಹೆಚ್ಚು ಪದವಿ, ಡಿಪ್ಲೋಮಾ ಪಾಸಾದವರಿಗೆ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇವರೆಲ್ಲರಿಗೂ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆರಂಭವಾಗಲಿದ್ದು, ಜಿಲ್ಲೆಯ ಅರ್ಹ ಅಭ್ಯರ್ಥಿಗಳು ನೇರವಾಗಿಯು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.

ಈಗಾಗಲೇ https://tinyurl.com/mnm8vykz   ಜಾಲತಾಣದಲ್ಲಿ ಆನ್‍ಲೈನ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಕುಡಿಯುವ ನೀರು, ಆರೋಗ್ಯ ಸುರಕ್ಷತೆ, ಲಘು ಉಪಹಾರ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ನಗರದ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 15 ರಿಂದ 5 ದಿನಗಳ ಕಾಲ 20 ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿರುವ ವಸ್ತುಗಳ ಮಾರಾಟಕ್ಕಾಗಿ ಮಾಸಿಕ ಸಂತೆಯನ್ನು ಏರ್ಪಡಿಸಲಾಗಿದೆ ಎಂದರು.

ಮಾರ್ಚ್ 14 ಮತ್ತು 15 ರಂದು ಎಲ್ಲಾ ಬ್ಯಾಂಕ್‍ಗಳ ಮೂಲಕ ಎಲ್ಲಾ ನಾಗರಿಕರಿಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೋಂದಾಯಿಸಲು ಬೃಹತ್ ಶಿಬಿರ ಮಾಡಲಾಗುತ್ತಿದೆ. ಈ ಎರಡೂ ವಿಮೆ ಮಾಡಿಸುವುದರಿಂದ ಅಪಘಾತ, ಮರಣ ಹೊಂದಿದಾಗ ಪರಿಹಾರ ಸಿಗಲಿದೆ ಎಂದರು.  ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!