ಹೊನ್ನಾಳಿ: ಮೃತ್ಯುಂಜಯ ಶ್ರೀಗಳ 55ನೇ ಪುಣ್ಯಾರಾಧನೆ, ಚಂದ್ರಶೇಖರ ಶ್ರೀಗಳ 10ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀ
ಹೊನ್ನಾಳಿ, ಮಾ.11- ಸ್ವಾರ್ಥ ಬದುಕಿನಿಂದಾಗಿ ಸಂಬಂಧಗಳು ಕ್ಷೀಣಿಸುತ್ತಿದ್ದು, ವೃದ್ಧಾಶ್ರಮಗಳು ತಲೆ ಎತ್ತಿ ನಿಂತಿವೆ. ವಿದ್ಯೆ ಪಡೆಯುವುದು ಹೆಚ್ಚಾದಂತೆ ಸ್ವಾರ್ಥವೂ ಹೆಚ್ಚಾಗುತ್ತಿದೆ. ಇದರ ಫಲವೇ ಇಂದು ಎಲ್ಲೆಂದರಲ್ಲಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ ಎಂದುಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ಹಿರೇಕಲ್ಮಠದಲ್ಲಿ ಮಂಗಳವಾರ ಆಯೋಜಿಸ ಲಾಗಿದ್ದ ಲಿಂ. ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿಯವರ 55ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 10ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀಮಠ ಮಾನ್ಯಗಳು ಧಾರ್ಮಿಕ ಕಾರ್ಯಗಳ ಜೊತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎಲ್ಲರನ್ನೂ ಸಂಸ್ಕಾರವಂತರನ್ನಾಗಿ ಮಾಡಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಪ್ರಯತ್ನವನ್ನು ಶ್ರೀಮಠ ಮಾಡುತ್ತಿದೆ. ಇದಕ್ಕೆ ಭಕ್ತರೂ ಸಹ ಶ್ರಮಿಸುತ್ತಿದ್ದಾರೆ ಎಂದರು.
ಈಗಲಾದರೂ ಸ್ವಾರ್ಥ ಬಿಟ್ಟು, ವಿಶಾಲ ಮನೋಭಾವದಿಂದ ಸಕುಟಂಬದ ಜೊತೆ ಸಹ ಬಾಳ್ವೆಯಿಂದ ಜೀವನ ನಡೆಸಿದರೆ ತಮ್ಮ ಬದುಕಿಗೊಂದು ಅರ್ಥ ಬರುತ್ತದೆ ಎಂದರು.
ಬಿಳಿಕಿ ಮಠದ ರಾಚೋಟೇಶ್ವರ ಶೀವಾಚಾರ್ಯ ಶ್ರೀಗಳು ಮಾತನಾಡಿ, ಹೊನ್ನಾಳಿಯ ಹಿರೇಕಲ್ಮಠ ಎರಡನೇ ಶ್ರೀಶೈಲ ಮಠ ಎಂದು ಖ್ಯಾತಿ ಪಡೆದಿದೆ. ಶ್ರೀಮಠ ಅಂತಹ ಸಂಸ್ಕಾರ, ಸನ್ಮಾರ್ಗ ನೀಡುತ್ತಾ ಕಾಲಕಾಲಕ್ಕೆ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದೆ ಎಂದರು.
ರಟ್ಟಿಹಳ್ಳಿಯ ಶ್ರೀ ಶಿವಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಇತ್ತೀಚಿಗೆ ಕನ್ಯಾ ಪಿತೃಗಳು ತಮ್ಮ ಮಗಳಿಗೆ ಮದುವೆ ಮಾಡುವಾಗ ವರನ ಕಡೆಯವರಿಗೆ ಅನೇಕ ನಿಬಂಧನೆಗಳನ್ನು ಹಾಕುತ್ತಿ ದ್ದಾರೆ. ವರ ಸರ್ಕಾರಿ ನೌಕರಿ, ನಗರ ಪ್ರದೇಶದಲ್ಲಿ ವಾಸ, ವರನ ಕಡೆಯವರು ಬಹಳ ಜನ ಇರಬಾರದು ಎಂಬ ನಿಬಂಧನೆಗಳನ್ನು ಹಾಕುವ ಕಾಲ ಬಂದಿದೆ. ಇದರಿಂದಾಗಿಯೇ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ಇಂತಹ ಸಂಕುಚಿತ ಮನೋಭಾವ ಬಿಡಬೇಕು ಎಂದರು.
ಮುಷ್ಟೂರು ಮಠದ ರುದ್ರಮುನಿ ಶಿವಾ ಚಾರ್ಯ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಧಾರ್ಮಿಕ ನಂಬಿಕೆಗಳು ಕಡಿಮೆಯಾಗುತ್ತಿರುವುದು ಎಲ್ಲಾ ರೀತಿಯ ದುಃಖಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಬೃಹನ್ಮಠದ ರಾಂಪುರದ ಶಿವಕುಮಾರ ಹಾಲಸ್ವಾಮಿ, ಗೋವಿನಕೋವಿ ವಿಶ್ವಾರಾಧ್ಯ ಮಹಾಲಿಂಗಸ್ವಾಮೀಜಿ, ಮೈಸೂರಿನ ಸುಜ್ಞಾನದೇವ ಶಿವಾಚಾರ್ಯರು, ಪ್ರಮುಖರಾದ ಪಟ್ಟಣಶೆಟ್ಟಿ ಪರಮೇಶ್, ಎಚ್.ಎ.ಉಮಾಪತಿ, ಹೊಸಕೇರಿ ಸುರೇಶ್, ಪುರಸಭೆ ಅಧ್ಯಕ್ಷ ಮೈಲಪ್ಪ ಮಾತನಾಡಿದರು.
ಮುಂಡರಗಿ ತಾಲ್ಲೂಕು ಕೋರ್ಲಹಳ್ಳಿಯ ನಾಗಪ್ಪ ಗಂಗಪ್ಪ ಮಜ್ಜಿಗೆ ಇವರಿಗೆ ಲಿಂ. ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖಂಡರಾದ ಎಂ.ಪಿ. ರಮೇಶ್, ಮಂಜುನಾಥ, ಇಂಚರ, ಗದ್ದಿಗೇಶ್, ಸಣ್ಣಕ್ಕಿ ಬಸವನಗೌಡ, ಕುಮಾರಸ್ವಾಮಿ, ಗಂಗಾಧರಯ್ಯ, ಚನ್ನಯ್ಯ ಬೆನ್ನೂರುಮಠ, ರುದ್ರಣ್ಣ, ಶ್ರೀಮಠದ ಚನ್ನಬಸವಯ್ಯ ಇತರರು ಇದ್ದರು.