ಕಷ್ಟ ಬಂದಾಗ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ

ಕಷ್ಟ ಬಂದಾಗ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ

ಬಾಳೆಹೊನ್ನೂರಿನಲ್ಲಿ ಜರುಗಿದ ಕೃಷಿ ಸಮ್ಮೇಳನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ತಾಕೀತು

ಬಾಳೆಹೊನ್ನೂರು, ಮಾ. 11-   ಕಷ್ಟ ಬಂದಾಗ ರೈತರು ಆತ್ಮಸ್ಥೈರ್ಯ  ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು   ಎಂದು  ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು  ತಾಕೀತು ಮಾಡಿದರು. 

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದಿಂದ ಇಂದು ಜರುಗಿದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಭೂಮಿಯಲ್ಲಿ ಅದ್ಭುತ ಶಕ್ತಿಯಿದೆ. ಭೂ ತಾಯಿ ಮಡಿಲಿಗೆ ಹಿಡಿ ಕಾಳು ಹಾಕಿದರೆ ಖಂಡಗ ಕಾಳು ಕೊಡುತ್ತಾಳೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕಲಿಗೆ ಒಕ್ಕದಿದ್ದರೆ ಲೋಕವೆಲ್ಲ ಬಿಕ್ಕುವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಮಲೆನಾಡಿನ ಪ್ರಾಂತ್ಯದಲ್ಲಿ ಕಾಫಿ ಮತ್ತು ಅಡಿಕೆ ಬೆಳೆ ಮುಖ್ಯವಾದವುಗಳು. ಕೃಷಿ ಮಾಡುವ ರೈತ ಏನೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಬಿಜೆಪಿ  ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತ ನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಾಂತಿ ಸಾಮಾನ್ಯವಾದುದಲ್ಲ. ಸಕಲ ಜೀವಾತ್ಮರನ್ನು ಉದ್ಧರಿಸಿದ ಮಹಾನ್ ಆಚಾರ್ಯ ಪುರುಷರು. ಅವರು ಕೊಟ್ಟ ತತ್ವ ಸಂದೇಶ ಕಾಯಕ ಜೀವನದ ಹಿರಿಮೆ ನಮ್ಮೆಲ್ಲರ ಪ್ರಗತಿಗೆ ಅಡಿಪಾಯ ಎಂದು ಹೇಳಿದರು.

ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೃಷಿ ಸಮ್ಮೇಳನ ಹಮ್ಮಿಕೊಂಡಿರುವುದು ಶ್ರೀ ರಂಭಾಪುರಿ ಪೀಠದ ರೈತ ಪರವಾದ ಕಳಕಳಿ ವೇದ್ಯವಾಗುತ್ತದೆ. 

ಸಾಧ್ಯವಾದುದನ್ನು ಮಾಡಲು ಶಕ್ತಿ ಸಾಕು. ಅಸಾಧ್ಯವಾದುದನ್ನು ಮಾಡಲು ವಿಶ್ವಾಸ ಮುಖ್ಯ. ಶಕ್ತಿ, ವಿಶ್ವಾಸಗಳಿಂದ ಎಲ್ಲವೂ ಸಾಧ್ಯ ಎಂದರು.

ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.  ಎನ್.ಆರ್.ಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಸಚಿನ್ ಕುಮಾರ್ ಮಾತನಾಡಿದರು.  

ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ, ಧರ್ಮರಾಜ ಹೊಂಕ್ರವಲ್ಲಿ, ಹೆಚ್.ಬಿ. ರಾಜಗೋಪಾಲ್, ರವಿಚಂದ್ರ, ಕೊರಟಗೆರೆ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ಹಾಗೂ ವೀರಭದ್ರಗೌಡ ಕೆ.ವಿ. ಕುಪ್ಪಗೋಡು ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. 

ಕು. ಅನ್ವಿತ – ವಂದನ ಅವರು ಭರತ ನಾಟ್ಯ ಪ್ರದರ್ಶನ ಮಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ ಅಲ್ದೂರು   ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ  ಪ್ರಾರ್ಥಿಸಿದರು. ಶಿಕ್ಷಕರಾದ ಹೇಮಲತಾ  ಬಿಕ್ಕೋಡು ಹಾಗೂ ಲೀಲಾವತಿ ಕೆ.ಎಸ್ ಪಡುವಳಲು   ನಿರೂಪಿಸಿದರು.  ಪ್ರವೀಣ ಬೆಳಗೊಳ ರೈತಗೀತೆ ಹಾಡಿದರು.

error: Content is protected !!