ಅಥಣಿ ಕಾಲೇಜಿನ ಆವರಣದಲ್ಲಿ ಗಂಧರ್ವ ಲೋಕ ಸೃಷ್ಟಿಸಿದ ಕಲಾವಿದರು

ಅಥಣಿ ಕಾಲೇಜಿನ ಆವರಣದಲ್ಲಿ ಗಂಧರ್ವ ಲೋಕ ಸೃಷ್ಟಿಸಿದ ಕಲಾವಿದರು

ಚಿರಂತನದಿಂದ ವೈವಿಧ್ಯಮಯ ನೃತ್ಯ

ದಾವಣಗೆರೆ, ಮಾ. 4 – ನಗರದಲ್ಲಿ ಮೊನ್ನೆ ಏರ್ಪಾಡಾಗಿದ್ದ `ಶಿವರಾತ್ರಿ ಉತ್ಸವ’ದಲ್ಲಿ ಸ್ಥಳೀಯ120ಕ್ಕೂ ಹೆಚ್ಚು ಕಲಾವಿದರು, ವೈವಿಧ್ಯಮಯ ನೃತ್ಯ, ಸಂಗೀತ ಪ್ರಸ್ತುತಿಗಳ ಮೂಲಕ ಗಂಧರ್ವ ಲೋಕವನ್ನೇ ಧರೆಗಿಳಿಸಿದರು. 

ಮಧ್ಯ ಕರ್ನಾಟಕದಲ್ಲೇ ಅತೀ ಎತ್ತರದ ಶಿವನ ಮೂರ್ತಿ ಎಂಬ ಕೀರ್ತಿಗೆ ಪಾತ್ರವಾಗಿ ರುವ ನಗರದ ಎಸ್.ಎಸ್. ಬಡಾವಣೆಯ ಅಥಣಿ ಕಾಲೇಜಿನ ಆವರಣದ ಪ್ರಶಾಂತ ವಾತಾವರಣದಲ್ಲಿ ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೂ ಸತತವಾಗಿ ಒಂದಾದ ಮೇಲೊಂದು ಭರತನಾಟ್ಯ, ಭಕ್ತಿ ನೃತ್ಯ, ಭಕ್ತಿ ಸಂಗೀತ, ಶ್ಲೋಕ, ಪಠಣ, ವಚನ ಗಾಯನ ನಡೆಯುತ್ತಾ ಹೋದಾಗ ನೆರೆದ 5000ಕ್ಕೂ ಹೆಚ್ಚು ಪ್ರೇಕ್ಷಕರು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಭರ್ಜರಿ ಚಪ್ಪಾಳೆ ಹಾಕಿದರು.

ಚಿರಂತನ ಅಕಾಡೆಮಿ ನೇತೃತ್ವದಲ್ಲಿ ಅಥಣಿ ಕಾಲೇಜು, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಕೈಗಾರಿಕೋದ್ಯಮಿ ಡಾ. ಅಥಣಿ ಎಸ್. ವೀರಣ್ಣ ಅವರು ದಾವಣಗೆರೆ ಪ್ರತಿಭೆಗಳಿಗೆ ಈ ರೀತಿ ವೇದಿಕೆ ಸೃಷ್ಟಿಸಿರುವು ದರ ಬಗ್ಗೆ ಮೆಚ್ಚುಗೆ ಸೂಚಿಸಿದರು. ಚಿರಂತನ ಸಂಸ್ಥೆಯ ಪ್ರಯತ್ನಗಳನ್ನು ಶ್ಲ್ಯಾಘಿಸಿದರು. 

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್‌ ಅವರು ಮಾತನಾಡಿ, ಶಿವರಾತ್ರಿಯ ಮಹತ್ವವನ್ನು ತಿಳಿಸಿ, ಭಕ್ತಿ, ನೃತ್ಯ, ಸಂಗೀತದ ಮುಖಾಂತರ ಜಾಗರಣೆ ಆಯೋಜಿ ಸಿರುವ ಈ ಪ್ರಯತ್ನ ಸಫಲವಾಗಿದೆ ಎಂದು ಹೇಳಿದರು. 

ಗಣ್ಯರಾದ ದೇವರಮನಿ ಶಿವಕುಮಾರ್, ಎ.ವಿ. ಪ್ರಸಾದ್, ಎಸ್.ಬಿ.ಸಿ. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖಪ್ಪ, ಶ್ರೀಮತಿ ಎಂ.ಎಸ್. ಅಲಕಾನಂದ ಹಾಗೂ ಚಿರಂತನ ಅಧ್ಯಕ್ಷೆ ಶ್ರೀಮತಿ ದೀಪಾ ಎನ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮಾಧವ್ ಪ್ರಸಾದ್ ಪದಕಿ ಕಾರ್ಯ ಕ್ರಮ ನಿರೂಪಿಸಿದರು. ಶಿವರಾತ್ರಿಯಂದು 120ಕ್ಕೂ ಹೆಚ್ಚು ಕಲಾವಿದರು ತಮ್ಮ ಸಂಗೀತ, ನೃತ್ಯದ ಮುಖಾಂತರ ಶಿವನ ಭಕ್ತಿಯನ್ನು ಸಾರುವ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ವಿಶೇಷವಾಗಿತ್ತು.

error: Content is protected !!