ಸತತ ಹೋರಾಟದ ಫಲದಿಂದಲೇ ಶಾಸಕನಾಗಲು ಸಾಧ್ಯವಾಯಿತು

ಸತತ ಹೋರಾಟದ ಫಲದಿಂದಲೇ ಶಾಸಕನಾಗಲು ಸಾಧ್ಯವಾಯಿತು

ಹೊನ್ನಾಳಿ, ಮಾ. 3 – ಸಾಮಾನ್ಯರಲ್ಲಿ ಸಾಮಾನ್ಯನಾಗಿ ಎಲ್ಲಾ ವರ್ಗದ ಸಾಮಾನ್ಯ ಜನತೆಯ ನಡುವೆ ಜೀವನ ಸಾಗಿಸಿ ಹೋರಾಟ ಮಾಡಿದ್ದರ ಪ್ರತಿಫಲ ನನ್ನನ್ನು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ಜನತೆ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಪಕ್ಷ ಸಹ ನನ್ನನ್ನು ಸಚಿವನಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಹಾಗೂ ವಿವಿಧ ನಿಗಮಗಳ ಅಧ್ಯಕ್ಷನಾಗಿಯೂ ಹುದ್ದೆ ನೀಡಿದೆ. ಇದಕ್ಕಿಂತ ಸೌಭಾಗ್ಯ ಬೇರೆ ಏನಿದೆ, ಈ ಎಲ್ಲಾ ಅಧಿಕಾರ ಸಿಕ್ಕಿದ್ದು ನಿಮ್ಮಿಂದ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕು ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳು ಇಂದು ಆಯೋಜಿಸಿದ್ದ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರು ಮಾತನಾಡಿದರು.

ನಾನು ಶಾಸಕನಾಗುವ ಮೊದಲು ಅನೇಕ ಹೋರಾಟ, ಸರ್ಕಾರದ ವಿರುದ್ದ ಪ್ರತಿಭಟನೆ ಹಾಗೂ ಪಕ್ಷದ ಸಂಘಟನೆ ಮಾಡಿದ್ದ ಪ್ರತಿಫಲ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಮೊದಲ ಸಲ ಟಿಕೆಟ್ ಘೋಷಣೆ ಮಾಡಿದರು. ಯುವಕರು ನನ್ನ ಪರವಾಗಿ ನೇರವಾಗಿ ಚುನಾವಣೆ ಮಾಡಿದರೆ, ಹಿರಿಯರು ತೆರೆಯ ಹಿಂದೆ ನನ್ನ ಪರವಾಗಿ ಚುನಾವಣೆಯಲ್ಲಿ ಸಹಕಾರ ನೀಡಿದ್ದರಿಂದ ನಾನು ಗೆದ್ದೆ ಎಂದರು.

ಅಲ್ಲಿಂದ ನಾನು ಜನರ ಸಮಸ್ಯೆಗಳನ್ನು ಇಟ್ಟು ಕೊಂಡು ನಮ್ಮ ಪಕ್ಷದಲ್ಲಿ ಹಾಗೂ ವಿಪಕ್ಷ ಅಧಿಕಾರ ದಲ್ಲಿದ್ದಾಗಲು ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ, ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ 4,500 ಕೋಟಿ ಅನುದಾನ ತಂದು ಅವಳಿ ತಾಲ್ಲೂಕಿನ ನೀರಾವರಿ, ಆರೋಗ್ಯ, ಶಿಕ್ಷಣ, ಚತುಷ್ಪಥ ರಸ್ತೆ ಗ್ರಾಮೀಣ ರಸ್ತೆ, ಕೆರೆಗೆ ನೀರು ತುಂಬಿಸುವ ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಕ್ಷೇತ್ರದ ಅಭಿ ವೃದ್ಧಿ ಮಾಡಿದ್ದನ್ನು ರೇಣುಕಾಚಾರ್ಯ ವಿವರಿಸಿದರು.

ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ನಾನೇ ರಾಜ್ಯದ ಹತ್ತಾರು ಮಂದಿಗೆ ಬಿಜೆಪಿ ಟಿಕೆಟ್ ಕೊಡಿಸುವ ಶಕ್ತಿಯನ್ನು ಕ್ಷೇತ್ರದ ಜನತೆ ನೀಡಿದ್ದಾರೆ ಎಂದು ಟಾಂಗ್ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ಸ್ನೇಹಕ್ಕೂ ಸಿದ್ದ ಸಮರಕ್ಕೂ ಬದ್ದ ಎಂಬಂತೆ   ಎಂ.ಪಿ. ರೇಣುಕಾಚಾರ್ಯ ಒಂದು ಬಾರಿ ಅವರು ಯಾರನ್ನಾದರೂ ನಂಬಿದರೆ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ, ಅಂತಹ ವಿಶಾಲ ಮನೋಭಾವದ ಗುಣ ಅವರಲ್ಲಿದೆ. ಹಾಗೆಯೇ ಕೊರೊನ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕೊರೊನಾ ಸಂತ್ರಸ್ಥರ ಸೇವೆ ಮಾಡಿದ ಇಂತಹ ಬದ್ದತೆ ಇರೋ ವ್ಯಕ್ತಿಯನ್ನು ಕ್ಷೇತ್ರದ ಜನತೆ ಸೋಲಿಸಿದ್ದು ವಿಷಾದನೀಯ ಎಂದರು.

ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ವಿಧಾನ ಸೌಧದಲ್ಲಿ ಎಂತಹ ತುರ್ತು ಸಭೆಗಳು ನಡೆಯುತ್ತಿದ್ದರೂ ಕ್ಷೇತ್ರದಲ್ಲಿ ಯಾರಾದರೂ ದೂರವಾಣಿ ಕರೆ ಮಾಡಿದರೆ ಸಾಕು ತಕ್ಷಣ ಅವರ ಕರೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಅಂತಹ ಬದ್ದತೆ ರೇಣುಕಾಚಾರ್ಯರದು. ಕೇವಲ ಅಧಿಕಾರ ಸಿಕ್ಕರೆ ಸಾಕು ಕ್ಷೇತ್ರದ ಜನತೆಯನ್ನು ಮರೆಯುವ ಇಂದಿನ ದಿನಗಳಲ್ಲಿ ಇಂತಹ ಜನಪ್ರತಿನಿಧಿಗಳು ಇರುವುದು ನಮ್ಮಂತಹವರಿಗೆ ಆದರ್ಶ ಎಂದರು.

ಮಾಯಕೊಂಡದ ಮಾಜಿ ಶಾಸಕ ಎಂ. ಬಸವರಾಜ ನಾಯ್ಕ್‍  ಚನ್ನಗಿರಿಯ ಮಾಡಾಳ್ ಮಲ್ಲಿಕಾರ್ಜುನ್, ಹರಿಹರದ ಚಂದ್ರುಶೇಖರ್ ಪೂಜಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿದರು.

ಮುಖಂಡರಾದ ಸತೀಶ್, ಧನಂಜಯ ಕಡ್ಲೆಬಾಳ್, ಅನಿಲ್ ನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ನೆಲಹೊನ್ನೆ ಮಂಜುನಾಥ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್,ಕೆ.ಪಿ.ಕುಭೇಂದ್ರಪ್ಪ,ದೊಡ್ಡೇರಿ ರಾಜಣ್ಣ, ಗಿರೀಶ್, ಸಿ.ಆರ್.ಶಿವಾನಂದ್, ಶಿವು ಹುಡೇದ್, ರಮೇಶ್‍ಗೌಡ, ಮಂಜು, ಇಂಚರ, ಮಹೇಶ್ ಹುಡೇದ್ ಹಾಗೂ ಇತರರು ಇದ್ದರು.

error: Content is protected !!