ಲಿಂಗದಹಳ್ಳಿಯಲ್ಲಿ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ರಟ್ಟಿಹಳ್ಳಿ ಶಿವಲಿಂಗ ಶ್ರೀಗಳು
ರಾಣೇಬೆನ್ನೂರು,ಫೆ.26- ಕೊರಳಲ್ಲಿ ಲಿಂಗ ಕಟ್ಟಿದವರಷ್ಟೇ ವೀರಶೈವರಲ್ಲ, ಲಿಂಗವನ್ನು ಪೂಜಿಸುವವರೆಲ್ಲ ವೀರಶೈವರೇ ಆಗಿದ್ದಾರೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶ್ರೀಗಳು ನುಡಿದರು.
ಶ್ರೀ ಗಳು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಹಿರೇಮಠದಲ್ಲಿ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಮನನ್ನು ಪೂಜಿಸುವವರು ಪೂಜಿಸಲಿ ಆದರೆ, ವೀರಶೈವ ಧರ್ಮ ಪುರಾತನವಾದುದು. ಮೌಲ್ಯಗಳನ್ನು ಅನುಷ್ಠಾನ ಮಾಡುವುದೇ ವೀರಶೈವ ಧರ್ಮದ ಆಚರಣೆ. ವೀರಶೈವ ಧರ್ಮದಲ್ಲಿ ಮಗುವು ತಾಯಿ ಗರ್ಭದಲ್ಲಿದ್ದಾಗಲೇ ಲಿಂಗಧಾರಣೆ ಮಾಡಲಾಗುತ್ತೆ. ಅಂದರೆ ಅದರ ಬದುಕು ಲಿಂಗದೊಂದಿಗೆ ಪ್ರಾರಂಭಗೊಳ್ಳುತ್ತದೆ. ನಾವ್ಯಾರು ದೇವರನ್ನು ನೋಡಿಲ್ಲ, ಆದರೆ ಅವನ ಮೇಲಿನ ಶ್ರದ್ಧೆ, ನಂಬಿಕೆಯಿಂದಾಗಿ ಅಂಗಡಿಯಲ್ಲಿನ ಬಾಳೆಹಣ್ಣು ಪ್ರಸಾದವಾಗುತ್ತದೆ. ಈ ನಂಬಿಕೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಭಾವೈಕ್ಯತೆ ಬೆಳೆಸುತ್ತದೆ ಎಂದು ಶ್ರೀಗಳು ನುಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಂತೋಷ ಪಾಟೀಲ ಮಾತನಾಡಿ, ನಾನು ಪ್ರಯಾಗರಾಜ್‌ಗೆ ಹೋಗಿ ನಂತರ ತ್ರಯಂಬಕ ಲಿಂಗ ದರ್ಶನಕ್ಕೆ ತೆರಳಿದ್ದೆ, ಆಗ ಅಲ್ಲಿಗೆ ಜಯ ಶ್ರೀರಾಮ ಎಂದು ಘೋಷಣೆ ಕೂಗುತ್ತ ಯುವಕರ ಗುಂಪು ಬಂದಿತು. ಯಾವ ದೇವರಿಗೆ ಯಾವ ಜಯ ಘೋಷ ಮಾಡಬೇಕು ಎನ್ನುವಷ್ಟು ತಿಳಿಯದ ಧಾರ್ಮಿಕ ಕತ್ತಲೆಯಲ್ಲಿ ನಾವಿದ್ದೇವೆ ಎನಿಸಿತು. ಹಾಗಾಗಿ ನಮ್ಮಲ್ಲಿರುವ ಇಂತಹ ಕತ್ತಲೆಯನ್ನು ದೂರಮಾಡಿ, ಬೆಳಕು ತರಲು ನಮ್ಮ ಮಠಗಳು, ಸ್ವಾಮೀಜಿಗಳು ಶ್ರಮಿಸುತ್ತಿದ್ದಾರೆ. ವಿಶ್ವದಲ್ಲಿಯೇ ದೊಡ್ಡದಾದ ಸ್ಪಟಿಕ ಲಿಂಗ ಇರುವ ಈ ಕ್ಷೇತ್ರ ಸಮಸ್ಥ ಜನರ ಬದುಕನ್ನು ಹಸನು ಮಾಡಲಿದೆ ಎಂದರು.
ಪೀಠಾಧಿಪತಿ ವೀರಭದ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಾಲೂರ ಗುರುಲಿಂಗ ಜಂಗಮಶ್ರೀ ಗಳು, ತಾಪಂ ಮಾಜಿ ಅಧ್ಯಕ್ಷ ರವಿ ಪಾಟೀಲ, ಕೊಟ್ರೇಶ ಎಮ್ಮಿ, ಶೇಖಪ್ಪ ಬೇಡರ, ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಶಿವನಗೌಡ ಲಿಂಗದಹಳ್ಳಿ, ನಿತ್ಯಾನಂದ ಕುಂದಾಪುರ ಮತ್ತಿತರರಿದ್ದರು.