ಬೇಸಿಗೆ ಮುಗಿವವರೆಗೆ ಪೂರ್ಣ ಹೆಲ್ಮೆಟ್‌ಗೆ ವಿನಾಯತಿ ನೀಡಿ

ಬೇಸಿಗೆ ಮುಗಿವವರೆಗೆ ಪೂರ್ಣ ಹೆಲ್ಮೆಟ್‌ಗೆ ವಿನಾಯತಿ ನೀಡಿ

ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ: ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ಸಭೆಯಲ್ಲಿ ಕೇಳಿ ಬಂದ ಅನಿಸಿಕೆ…….

ಪೂರ್ಣ ಹೆಲ್ಮೆಟ್ ಧರಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.

ತಲೆ ಕೂದಲು ಉದುರುವುದು, ಚರ್ಮರೋಗ ಬರುವ ಸಾಧ್ಯತೆ ಹೆಚ್ಚು.

ನಗರ ವ್ಯಾಪ್ತಿಯಲ್ಲಿ ಮಾತ್ರವಿನಾಯತಿ ಇರಲಿ, ಹೊರವಲಯದಲ್ಲಿ ಪೂರ್ಣ ಹೆಲ್ಮೆಟ್ ಕಡ್ಡಾಯ ಇರಲಿ.

ಹೆಲ್ಮೆಟ್ ಕಡ್ಡಾಯ ನೆಪ ಮಾತ್ರ. ಇದು ಕೂಡ ಒಂದು ಮಾಫಿಯಾ.

ಕಾನೂನು ಪಾಲನೆ ನಮ್ಮ ಕರ್ತವ್ಯ. ಆದರೂ ಮಾನವೀಯತೆ ದೃಷ್ಟಿಯಿಂದ ವಿನಾಯತಿ ನೀಡಿ.

ದಾವಣಗೆರೆ, ಫೆ.27- ಯಾರೂ ಕಾನೂನಿನ ವಿರೋಧಿಗಳಲ್ಲ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ಆದರೆ ತಲೆ ಕೂದಲು ಉದುರುವುದು, ಚರ್ಮ ರೋಗಕ್ಕೆ ತುತ್ತಾಗುವ ಆತಂಕ ಮತ್ತು ವೈಯಕ್ತಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಬೇಸಿಗೆ ಕಾಲ ಮುಗಿಯುವವರೆಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದು ಕಡ್ಡಾಯ ಬೇಡ. ವಿನಾಯತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಮಾಡಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಇಂದು ಸಂಜೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಲ್ಮೆಟ್ ಕಡ್ಡಾಯ ಕ್ರಮವನ್ನು ಹಿಂಪಡೆದು, ಬೇಸಿಗೆ ಸಂಪೂರ್ಣವಾಗಿ ಮುಕ್ತಾಯದವರೆಗೆ ವಿನಾಯತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಲ್ಲಿ ಮನವಿ ಮಾಡುವುದಾಗಿ ಅವರು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್‌ ಜಾಧವ್, ಪಾಲಿಕೆ ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ್, ಮುಖಂಡರಾದ ಅಯೂಬ್ ಪೈಲ್ವಾನ್, ಎ.ನಾಗರಾಜ್, ಮೈನುದ್ದೀನ್, ಎಸ್. ಮಲ್ಲಿಕಾರ್ಜುನ್,  ಮಂಗಳಮ್ಮ, ಕೊಟ್ರಯ್ಯ ಬಸಾಪುರ, ರಾಧೇಶ್ ಜಂಬಗಿ ಸೇರಿದಂತೆ ಅನೇಕರು ಪೂರ್ಣ ಪ್ರಮಾಣದ ಹೆಲ್ಮೆಟ್ ಬಳಕೆಯಿಂದಾಗುವ ಅನಾನುಕೂಲಗಳ ಬಗ್ಗೆ ಮಾತನಾಡಿ, ಬೇಸಿಗೆ ಮುಗಿಯುವವರೆೆಗೆ ವಿನಾಯತಿ ನೀಡಬೇಕೆಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಜಾಕೀರ್, ಮಹಾಂತೇಶ್‌, ಸಂತೋಷ್, ಈಶ್ವರ್, ಯುವರಾಜ್ ಇತರರಿದ್ದರು.

error: Content is protected !!