ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ವ್ಯಾಕುಲತೆ
ದಾವಣಗೆರೆ. ಫೆ. 24 – ಹಿಂದೆಲ್ಲಾ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಈಗ ಮನೆಮದ್ದು ಮರೆತು ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ವಕೀಲರ ಭವನದಲ್ಲಿ ಆಯುಷ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಲಯ ಸಿಬ್ಬಂದಿಗೆ ಮೊನ್ನೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಯಾರಿಗೇ ಸಮಸ್ಯೆಯಾದರೂ ಮನೆಮದ್ದು ಇರುತ್ತಿತ್ತು. ಆದರೆ ಇಂದು ನಾವು ಆಧುನೀಕತೆ ಭರಾಟೆಯಲ್ಲಿ ಅತ್ಯಮೂಲ್ಯವಾದ ಮನೆಮದ್ದು ಮರೆತಿದ್ದೇವೆ. ನಿಯಮಿತ ಆಹಾರ ಸೇವಿಸದ ಕಾರಣ ಶರೀರ ಸಮತೋಲನದಲ್ಲಿಲ್ಲ. ಆಯುಷ್ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಇಲಾಖೆಗಳು ಸಾಕಷ್ಟು ಯೋಜನೆ, ಕಾರ್ಯಕ್ರಮ ಜಾರಿಗೊಳಿಸುತ್ತಿದ್ದರೂ ಜನರಿಗೆ ಅವುಗಳ ಲಾಭ ತಲುಪುತ್ತಿಲ್ಲ. ಮಾಧ್ಯಮಗಳಲ್ಲಿ ಬರುವ ಸುದ್ದಿಯ ನ್ನಾದರೂ ನೋಡಿ ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಆಶಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ, ಕೋವಿಡ್ ವೇಳೆ ಗಿಡಮೂಲಿಕೆಯ ಮಹತ್ವವನ್ನು ಇಡೀ ಜಗತ್ತು ಅರಿತಿದೆ. ನಮ್ಮ ಋಷಿಮುನಿಗಳು ಪರಿಚಯಿಸಿದ ಯೋಗ ಮತ್ತು ಆಯುರ್ವೇದವು ಕಾಯಿಲೆ ಉಪಶಮನಕ್ಕೆ ಪರಿಹಾರವಾಗಿದೆ. ಪರಿಸರದ ಮೂಲಕ ಬಂದ ಆರೋಗ್ಯ ಪದ್ಧತಿಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಪ್ರಸ್ತುತ ವಕೀಲರು, ನ್ಯಾಯಾಧೀಶರು, ಸಿಬ್ಬಂದಿ ಸದಾ ಒತ್ತಡದ ಜೀವನ ನಡೆಸುತ್ತಾರೆ. ಹೀಗಾಗಿ ತಿಂಗಳಿಗೊಮ್ಮೆಯಾದರೂ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು. ದಿನದ ಒಂದು ಗಂಟೆಯಾದರೂ ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಬೇಕು. ಈ ಮೂಲಕ ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಮಾತನಾಡಿ, ಎಲ್ಲಾ ಭಾಗ್ಯಗಳ ಪೈಕಿ ಆರೋಗ್ಯ ಭಾಗ್ಯ ದೊಡ್ಡದು. 15 ದಶಲಕ್ಷ ವರ್ಷಗಳ ಹಿಂದೆ ಮನುಷ್ಯ ಜನಿಸಿದಾಗ ತನ್ನ ಆರೋಗ್ಯವನ್ನು ತಾನೇ ಕಾಪಾಡಿಕೊಳ್ಳುವಂತಿದ್ದ. ಆದರೆ, ಕಲುಷಿತ ಆಹಾರ ಸೇವನೆಯಿಂದಾಗಿ ಇಂದು ನಮ್ಮ ಆರೋಗ್ಯ ಹದಗೆಟ್ಟಿದೆ. ಜೀವವನ್ನು ನಿಯಂತ್ರಣದಲ್ಲಿಡುವ ಶಕ್ತಿ ಇಲ್ಲದಿದ್ದರೂ, ಜೀವನ ರೂಪಿಸಿಕೊಳ್ಳುವ ಶಕ್ತಿ ನಮಗಿದೆ. ಇದಕ್ಕಾಗಿ ಸರಿಯಾಗಿ ಊಟ ಮಾಡಿ, ಕುಟುಂಬದವರ ಜೊತೆಗೆ ಉತ್ತಮ ಬಾಂಧವ್ಯದಿಂದ ಇರಬೇಕು. ಚೆನ್ನಾಗಿ ನಿದ್ದೆ ಮಾಡಿ ಉತ್ತಮ ಆರೋಗ್ಯ ಹೊಂದಬೇಕು. ಆಹಾರ ಸೇವಿಸುವಲ್ಲಿ ಮುತುವರ್ಜಿ ವಹಿಸುವ ಜೊತೆಗೆ ಸದಾ ಆನಂದವಾಗಿರಬೇಕು. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಬಿ.ಯು.ಯೋಗೇಂದ್ರ ಕುಮಾರ್ ಮಾತನಾಡಿ, ಜನರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದೇ ಆಯುಷ್ ಇಲಾಖೆ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವ ಜನಿಕರಿಗೆ ಅನೇಕ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವ ವಕೀಲರ ಆರೋಗ್ಯಕ್ಕಾಗಿ ಆಯುಷ್ ಇಲಾಖೆಯವರು ತಪಾಸಣೆ ಮಾಡುತ್ತಿರುವುದು ಶ್ಲ್ಯಾಘನೀಯ. ಜಿಲ್ಲಾಸ್ಪತ್ರೆ ಸೇರಿದಂತೆ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ಬೇರೆ ಕಡೆ ಚೀಟಿ ಬರೆಯುವುದು ಸರ್ವೇಸಾಮಾನ್ಯ ಆದರೆ, ಆಯುಷ್ ಆಸ್ಪತ್ರೆಯಲ್ಲಿ ಯಾವುದೇ ಚೀಟಿಯನ್ನು ಹೊರಗೆ ಬರೆದುಕೊಡುವುದಿಲ್ಲ. ಆಹಾರವೇ ಔಷಧ ಎಂಬಂತೆ ಆಯುಷ್ ಇಲಾಖೆಯ ಸಲಹೆ ಪಡೆದು ನಾವು ಬದಲಾಗಬೇಕಿದೆ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್.ಪ್ರವೀಣ್ ಕುಮಾರ್, ಎಸ್.ಟಿ.ಎಫ್.ಸಿ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, ನ್ಯಾಯಾಧೀಶರಾದ ಟಿ.ಎಂ.ನಿವೇದಿತ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.