ಕೊನೆ ಸಭೆಯಲ್ಲೂ ಮುಂದುವರಿದ ಆಡಳಿತ-ಪ್ರತಿಪಕ್ಷದ ವಾಕ್ಸಮರ
ದಾವಣಗೆರೆ, ಫೆ. 17- ಅಧಿಕಾರಿಗಳು ಪ್ರತಿ ಬಾರಿಯೂ ತಪ್ಪು ಮಾಡುತ್ತಾರೆ. ತಪ್ಪು ಮಾಡುವುದು ಸಂವಿಧಾನ ಮತ್ತು ಸಭೆಗೆ ಮಾಡುವ ಅವಮಾನ ಎಂದು ಪಾಲಿಕೆ ಸದಸ್ಯ ಬಿಜೆಪಿಯ ಕೆ.ಪ್ರಸನ್ನಕುಮಾರ್ ಎಂದು ಹೇಳಿದರು.
ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಸಭೆಯ ಅಜೆಂಡಾ ಪ್ರತಿಯಲ್ಲಿನ ತಪ್ಪು ಆಗಿರುವ ಬಗ್ಗೆ ಗಮನಿಸಿದ ಪ್ರಸನ್ನಕುಮಾರ್ ಅಧಿಕಾರಿಗಳು ಪ್ರತಿ ಬಾರಿ ತಪ್ಪು ಮಾಡುತ್ತಿದ್ದಾರೆಂದು ದೂರಿದರು.
ದೊಡ್ಡ ಪ್ರಮಾದವೇನೂ ಆಗಿಲ್ಲ. ಆದರೂ ಮೇಯರ್ ಅವರು ಕಣ್ಣುಮುಚ್ಚಿ ಸಹಿ ಹಾಕುತ್ತಾರೆ ಎಂಬ ಆರೋಪ ಸರಿಯಲ್ಲ. ಮೇಯರ್ ಅವರು ಕಡಿಮೆ ಅವಧಿಯಲ್ಲಿಯೇ ಆರು ಸಭೆಗಳನ್ನು ನಡೆಸಿದ್ದಾರೆಂದು ಹೇಳಿದರು.
ಮೇಯರ್ ಕಡಿಮೆ ಅವಧಿಯಲ್ಲಿ ಆರು ಸಭೆ ನಡೆಸಿದ್ದಾರೆ. ಅವುಗಳು ಎಲ್ಲವೂ ತೌಡು ಕುಟ್ಟಿದರು ಎನ್ನುವಂತಾಗಿದೆ ಎಂದು ಪ್ರಸನ್ನಕುಮಾರ್ ತಿರುಗೇಟು ನೀಡಿದರು.
ನಗರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ಸಮಯದಲ್ಲಿ ಮೂರು ವರ್ಷಗಳ ಅಧಿಕಾರವಧಿಯಲ್ಲಿ ಬಿಜೆಪಿಯವರಾದ ನೀವು ಏನು ಮಾಡಿದ್ದೀರಿ. ಯಾವುದೇ ಕೆಲಸಗಳೂ ಆಗಿಲ್ಲ ಎಂದು ಸದಸ್ಯ ಎ.ನಾಗರಾಜ್ ದೂರಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಪ್ರಸಕ್ತ ಸಾಲಿನ ಕೊನೆಯ ಸಾಮಾನ್ಯ ಸಭೆ ಇದ್ದಾಗಿದ್ದು, ಇದುವರೆಗಿನ ಕಹಿ ನೆನಪುಗಳನ್ನು ಮರೆತು ಸಿಹಿ ನೆನಪುಗಳೊಂದಿಗೆ ಮುಂದೆ ಸಾಗೋಣ. ಮಾದರಿ ಸಭೆಯನ್ನಾಗಿಸೋಣ ಎಂದು ಹೇಳಿದರು.
ತಪ್ಪುಗಳಾದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್ ಚಮನ್‌ಸಾಬ್ ಆಯುಕ್ತರಾದ ರೇಣುಕಾ ಅವರಿಗೆ ಸೂಚಿಸಿದರು.
ಚರಂಡಿ ಕಲ್ಲು ಹಾಕಿ ಜರ್ಮನ್ ಮಾದರಿ ಎನ್ನುತ್ತೀರಿ ಎಂದು ಟೀಕಿಸಿದ ಸದಸ್ಯ ಕೆ. ಪ್ರಸನ್ನ ಕುಮಾರ್ಗೆ ಕಾಮಗಾರಿ ಪೂರ್ತಿ ಆದ ನಂತರ ಜರ್ಮನ್ ಮಾದರಿ ಬಗ್ಗೆ ಮಾತನಾಡಿ ಎಂದ ಗಡಿಗುಡಾಳ್ ಮಂಜುನಾಥ್
ಗ್ಯಾಸ್ ಪೈಪ್ಲೈನ್ ಅಳವಡಿಕೆಗೆ ಅಧಿಕ ಶುಲ್ಕ: ಆಕ್ಷೇಪ
ನಗರದಾದ್ಯಂತ ಅಳವಡಿಸುತ್ತಿರುವ ಗ್ಯಾಸ್ ಪೈಪ್ಲೈನ್ ಗೆ ಕೇವಲ ಒಂದು ರೂ. ಗೆ ಒಂದು ಮೀಟರ್ ಶುಲ್ಕ ವಿದಿಸುತ್ತಿದ್ದು, ಇದು ಅತಿ ಕಡಿಮೆಯಾಗಿದೆ. ಆದರೆ ಜನ ಸಾಮಾನ್ಯರಿಗೆ ಒಂದು ಮೀಟರ್ಗೆ 1800 ರೂ. ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ಪಾಲಿಕೆ ಬಿಜೆಪಿ ಸದಸ್ಯ ಕೆ.ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹೇಳಿದ ಮಾತುಗಳಿಂದ ಅಸಮಾಧಾನಗೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಇಂಜಿನಿಯರ್ಗಳ ಮೇಲೆ ಮುಗಿಬಿದ್ದು ಅಸಮಾಧಾನ ಹೊರಹಾಕಿದರು.
ಕೊಡುವ ಸಂಬಳಕ್ಕಾದರೂ ಸರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಮೇಯರ್ ಚಮನ್‌ಸಾಬ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ಮಾತನಾಡಿ, ಗ್ಯಾಸ್ ಪೈಪ್ಲೈನ್ ಅಳವಡಿಕೆ ಕೇಂದ್ರ ಸರ್ಕಾರದ ಯೋಜನೆ. ಆದರೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಜಾರಿಗೊಳಿಸಲಾಗುತ್ತಿದೆ. ನೀವು ವಿರೋಧಿಸಿ ಎಂದರು.
ಶುಲ್ಕ ಹೆಚ್ಚಳ ಮಾಡುವ ಜೊತೆಗೆ ವಾರ್ಡ್ಗಳಿಗೆ ಪೈಪ್ಲೈನ್ ಅಳವಡಿಕೆಗೆ ಅನುಮತಿ ನೀಡಬೇಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.
ಮಾಜಿ ಮೇಯರ್ ಉಮಾ ಪ್ರಕಾಶ್ ಮಾತನಾಡಿ, ನಮ್ಮ ವಾರ್ಡಿನಲ್ಲಿ ನಗರಪಾಲಿಕೆಗೆ ಸೇರಿದ ಜಾಗ ನಮ್ಮದು ಎಂದು ಹೇಳುತ್ತಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಸರ್ವೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಜಾಗ ನಮ್ಮದು ಎಂದು ನಾಮಫಲಕ ಹಾಕಿರುವುದಾಗಿ ಆಯುಕ್ತರಾದ ರೇಣುಕ ತಿಳಿಸಿದರು.
ಆದರೂ ಈಗ ಜಾಗ ನಮ್ಮದು ಎಂದು ರುಜುವಾತು ಆದ ನಂತರ ಸರ್ಕಾರಿ ಜಾಗ ಎಂಬುದಾಗಿ ಬೋರ್ಡ್ ಹಾಕಿರುವುದಾಗಿ ಹೇಳಿದರು.
ಆದರೂ ಈಗ ಜಾಗ ನಮ್ಮದೇ ಎಂದು ಸರ್ವೇ ಮಾಡಿಸಿ, ಕ್ಲೀನ್ ಮಾಡಿಸುತ್ತಿದ್ದಾರೆ ಎಂದು ಉಮಾ ಪ್ರಕಾಶ್ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸರ್ಕಾರಿ ಜಾಗ ಎಂದು ಬೋರ್ಡ್ ಹಾಕಿದ್ದರೂ ನಮ್ಮದು ಎಂದು ಕ್ಲೀನ್ ಮಾಡುತ್ತಿರುವವರ ವಿರುದ್ಧ ಎಫ್‌ಐಎರ್ ದಾಖಲಿಸುವಂತೆ ಆಯುಕ್ತರು ಇಂಜಿನಿಯರ್‌ಗೆ ಸೂಚನೆ ನೀಡಿದರು.
ಆವರಗೆರೆ ಗೋಶಾಲೆಯಿಂದ ಚಿಕ್ಕನಹಳ್ಳಿಯವರೆಗೆ ರಿಂಗ್ ರಸ್ತೆ ಅಭಿವೃದ್ಧಿಗೆ 39 ಕೋಟಿ ರೂ. ಮೀಸಲಿಟ್ಟಿರುವ ಬಗ್ಗೆ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್ ಆಕ್ಷೇಪವೆತ್ತಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಎ.ನಾಗರಾಜ್ ಅವರು, ಜಿಲ್ಲಾ ಉಸ್ತುವಾರಿ ಸಚಿವರ ದೂರದೃಷ್ಟಿಯ ಯೋಜನೆ ರೂಪಿಸಿ, ಅನುದಾನ ಕಾಯ್ದಿರಿಸಿದ್ದಾರೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯ ಕೆ.ಪ್ರಸನ್ನಕುಮಾರ್ ಅವರು, ಚರಂಡಿ ಮೇಲೆ ಹಾಕಿರುವ ಹಾಸುಗಲ್ಲು ಹಾಕಿ ಜರ್ಮನ್ ಮಾದರಿ ವೃತ್ತ ಎನ್ನುತ್ತಿರುವುದು ದೂರದೃಷ್ಟಿಯೇ ಎಂದು ಪ್ರಸನ್ನಕುಮಾರ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರಾದ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್, ಅಬ್ದುಲ್ ಲತೀಫ್ ಅವರು, ಕೂಸು ಹುಟ್ಟುವುದಕ್ಕೆ ಮುಂಚಿತವಾಗಿಯೇ ಕುಲಾವಿ ಹೊಲಿಸಬೇಡಿ. ಕಾಮಗಾರಿ ಪೂರ್ತಿಯಾದ ನಂತರ ಜರ್ಮನ್ ವೃತ್ತದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿನ ಸಚಿವರು, ಸಂಸದರು ಏನೂ ಮಾಡಲಿಲ್ಲ. ಅಡ್ಡದಿಡ್ಡಿ ರೈಲ್ವೆ ಸೇತುವೆ ನಿರ್ಮಿಸಿರುವುದೇ ಸಾಧನೆ ಎಂದು ಟೀಕಿಸಿದರು.
ಇದರಿಂದ ಕುಪಿತಗೊಂಡ ಪ್ರಸನ್ನಕುಮಾರ್ ಅವರು, `ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ’ ಎನ್ನುವ ಹಾಗೆ ನೀವ್ಯಾಕೆ ಬೆನ್ನು ಮುಟ್ಟಿಕೊಳ್ತೀರಿ ಎಂದಾಗ ಆಕ್ರೋಶಗೊಂಡ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್ ಯಾರಿಗೆ ಕಳ್ಳ ಎಂದಿದ್ದು, ಈ ಮಾತನ್ನು ವಾಪಸ್ ಪಡೆಯಬೇಕು, ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಮೇಯರ್ ಸೇರಿದಂತೆ, ಕಾಂಗ್ರೆಸ್ ಸದಸ್ಯರೆಲ್ಲರೂ ಅಸಂವಿಧಾನಿಕ ಪದ ಬಳಕೆ ಮಾಡಿದ ಬಿಜೆಪಿ ಸದಸ್ಯರಿಗೆ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಜನರ ಹಣ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಗೆ ದಿಕ್ಕಾರ ಎಂದು ಕೂಗಿದರು. ಈ ವೇಳೆ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗು ಸ್ವಲ್ಪ ಸಮಯ ಸಭೆ ಮುಂದೂಡಲಾಯಿತು. ಬಳಿಕ ಮತ್ತೆ ಸಭೆ ಮುಂದುವರೆಯಿತು.
ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮಾಶಂಕರ್, ಎ.ಬಿ.ರಹೀಂ, ಸುರಭಿ ಶಿವಮೂರ್ತಿ, ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ಎಸ್.ಟಿ. ವೀರೇಶ್, ರೇಖಾ ಸುರೇಶ ಗಂಡಗಾಳೆ, ಯಶೋಧ ಹೆಗ್ಗಪ್ಪ ಮತ್ತಿತರರು ಭಾಗವಹಿಸಿದ್ದರು.