ಗ್ರಾಮಗಳಲ್ಲಿ ಸೌಹಾರ್ದತೆಗೆ ಮಹತ್ವ ನೀಡಿ

ಗ್ರಾಮಗಳಲ್ಲಿ ಸೌಹಾರ್ದತೆಗೆ ಮಹತ್ವ ನೀಡಿ

ಹಳೇಕುಂದುವಾಡ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾದಾರ ಚನ್ನಯ್ಯ ಶ್ರೀ

ದಾವಣಗೆರೆ, ಫೆ.17- ದೇವಸ್ಥಾನಗಳಲ್ಲಿ ಪಾತವಿತ್ರ್ಯತೆಗೂ, ಗ್ರಾಮಗಳಲ್ಲಿ ಸೌಹಾರ್ದತೆಗೂ ಮಹತ್ವ ನೀಡುವಂತೆ ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಳೇಕುಂದುವಾಡ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗ್ರಾಮಗಳಲ್ಲಿ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ದೇವಸ್ಥಾನಗಳು ಇರುತ್ತಿದ್ದವು. ಆದರೆ ಇಂದು ಉತ್ತಮ ದೇವಸ್ಥಾನಗಳು ನಿರ್ಮಾಣ ವಾಗುತ್ತಿವೆ. ಅದರಲ್ಲೂ ಕುಂದುವಾಡದಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನ ಯಾವ ಮಹಾನಗರದಲ್ಲಿನ ದೇವಸ್ಥಾನಗಳಿಗೂ ಸಾಟಿ ಇಲ್ಲ ಎಂಬಂತಿದೆ ಎಂದರು.

ದೇಶವು ತಂತ್ರಜ್ಞಾನದಲ್ಲಿ ಎಷ್ಟೇ ಮುಂದು ವರೆದರೂ ಧಾರ್ಮಿಕ ಭಾವನೆಗಳನ್ನು ಬಿಟ್ಟು ನಡೆಯುವ ಪರಿಸ್ಥಿತಿ ಇಲ್ಲ. ನಮ್ಮ ದೇಶದ ಜನರು ದೇವಸ್ಥಾನ, ಮಠ-ಮಂದಿರಗಳನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಎನ್ನುವಂತಿದೆ. ಹೀಗಾಗಿ ದೇವಸ್ಥಾನದ ಉದ್ಘಾಟನೆ ವೇಳೆ ಪಾವಿತ್ರ್ಯತೆಗೆ ನೀಡುವ ಮಹತ್ವ ವನ್ನು ಮುಂದಿನ ದಿನಗಳಲ್ಲೂ ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡುತ್ತಾ, ಬಸವಣ್ಣ ಮಾನವ ಕುಲದ ಉದ್ಧಾರಕ್ಕೆ ಹುಟ್ಟಿದ ಪುಣ್ಯಾತ್ಮ. ಬಸವ ತತ್ವ ಪಾಲನೆಯಿಂದ ಜಗತ್ತಿನ ಉದ್ಙಾರ, ಕಲ್ಯಾಣವಾಗುತ್ತದೆ. ಸುಖ-ಶಾಂತಿ ನೆಮ್ಮದಿ ಸಿಗುತ್ತದೆ. ಅಂತಹ ಬಸವ ತತ್ವ ಪಾಲನೆ ಮಾಡಿದ ಗ್ರಾಮ ಕುಂದುವಾಡ ಗ್ರಾಮ ಎಂದು ಶ್ಲ್ಯಾಘಿಸಿದರು.

ಸಮಾನತೆ ತತ್ವ ಇಲ್ಲಿ ಅನಾವರಣಗೊಂಡಿದೆ. ಬಸವೇಶ್ವದ ದೇವಾಲಯ ಕಟ್ಟುವ ಮೂಲಕ ಸರ್ವ ಜನಾಂಗದ ಮನಸ್ಸು ಕಟ್ಟಿದ್ದೀರಿ. ದೇವಸ್ಥಾನ ಕಟ್ಟುವುದು ಸುಲಭ. ಆದರೆ ಜನರ ಮನಸ್ಸು ಕಟ್ಟುವುದು ಕಷ್ಟ ಎಂದರು.

ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡುತ್ತಾ, ಧರ್ಮಕ್ಕೆ ಬೇರೇನೂ ವಾಖ್ಯಾನ ಕೊಡುವುದು ಬೇಡ. ಕೂಡಿ ಬಾಳುವುದೇ ನಿಜವಾದ ಧರ್ಮ. ಗ್ರಾಮಗಳಲ್ಲಿ ಸಾಮರಸ್ಯ ಬಹಳ ಮುಖ್ಯವೇ ಹೊರತು, ಜಾತಿಯಲ್ಲ. ಇಂದಿನ ಕಾರ್ಯಕ್ರಮದಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಿರುವುದು  ಸಾಮರಸ್ಯದ ಗ್ರಾಮ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಶಬರಿಗೆ ಶ್ರೀ ರಾಮ ಒಲಿದ, ಕನಕನಿಗೆ ಶ್ರೀ ಕೃಷ್ಣ ಒಲಿದ ಅವರು ಜಾತಿ ನೋಡಲಿಲ್ಲ. ಭಕ್ತಿ ನೋಡಿ ಒಲಿದರು. ಭಕ್ತನಿಗೆ ಅಥವಾ ಭಕ್ತಿಗೆ ಯಾವ ಜಾತಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಸಾಮರಸ್ಯ ಇರಬೇಕು ಎಂದರು.

ದೇವಲಾಯದಲ್ಲಿ ಭಕ್ತಿ, ವಿದ್ಯಾಲಯದಲ್ಲಿ ಜ್ಞಾನ ಪ್ರಾಪ್ತಿಯಾಗುತ್ತದೆ. ಭಕ್ತಿ ಹಾಗೂ ಜ್ಞಾನ ಎರಡೂ ಅತಿ ಮುಖ್ಯವಾದದ್ದು. ಮೂಢ ನಂಬಿಕೆ ಕೈಬಿಡಿ. ದುಂದುವೆಚ್ಚ ಕಡಿಮೆ ಮಾಡಿ ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ  ಮದುವೆ ಮಾಡಬೇಡಿ. ಅವರಿಗೆ ಉತ್ತಮ ಶಿಕ್ಷಣ ನೀಡಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೋತ್ಸಾಹಿಸಿ. ಧರ್ಮದ ಕಡೆ ಮುಖ ಮಾಡಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.

ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತಾ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಗ್ರಾಮಸ್ಥರು ದೇವಸ್ಥಾನಗಳಿಗೆ ಕೊಡುವಷ್ಟೇ ಮಹತ್ವವನ್ನು ಶಾಲೆಗಳಿಗೂ ನೀಡಬೇಕು ಎಂದು ಸಲಹೆ ನೀಡಿದರು. ಇಂದು ಮಕ್ಕಳಿಗೆ ವಿದ್ಯೆಯೇ ಮುಖ್ಯ. ವಿದ್ಯಾವಂತರಾದರೆ ಗ್ರಾಮವು ತಾನಾಗಿಯೇ ಅಭಿವೃದ್ಧಿ ಹೊಂದತ್ತದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಹತ್ವ ನೀಡುವಂತೆ ಹೇಳಿದರು.

ಇದೇ ವೇಳೆ ಗ್ರಾಮಸ್ಥರು, 4 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮೀಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್,  ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವತ್ಥ್‌, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

error: Content is protected !!