ವಿದ್ಯಾರ್ಥಿಗಳಿಗೆ ಹಿರಿಯ ನ್ಯಾಯವಾದಿ ಬಿ.ಎಂ.ಹೆಚ್. ಕಿವಿಮಾತು
ದಾವಣಗೆರೆ, ಫೆ.14- ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಸ್ಥಾನ-ಮಾನ ಪಡೆಯುವುದರ ಜೊತೆಗೆ, ಕೃಷಿ ಸಂಸ್ಕೃತಿಯಲ್ಲೂ ಆಸಕ್ತಿ ವಹಿಸಿ ರೈತರಾಗಿ ವ್ಯವಸಾಯ ಮಾಡಬೇಕು. ಆ ಮೂಲಕ ಬದುಕನ್ನು ಹಸನಗೊಳಿಸಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಮತ್ತು ಸಾಮಾಜ ಚಿಂತಕ ಬಿ.ಎಂ. ಹನುಮಂತಪ್ಪ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಜಯನಗರ `ಎ’ ಬ್ಲಾಕ್‌ನಲ್ಲಿರುವ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಶಾಲೆಯ ವಾರ್ಷಿಕೋತ್ಸವದ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳು ಚೆನ್ನಾಗಿ ಓದಬೇಕು, ಇಷ್ಟಪಟ್ಟು ಓದಬೇಕು. ನಿದ್ದೆ, ಊಟ, ಸ್ನಾನ ಸರಿಯಾದ ಸಮಯಕ್ಕೆ ಮುಗಿಸಿ ಓದುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಪ್ರತಿಪಾದಿಸಿದ ಅವರು, ಶಿಕ್ಷಣ ಸೋಮಾರಿಗಳ ಸ್ವತ್ತಲ್ಲ, ಕಷ್ಟಪಟ್ಟು ಓದುವವರ ಸ್ವತ್ತು ಎಂದು ಉದಾಹರಣೆಯೊದಿಗೆ ತಿಳಿಸಿದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಿದರೆ ಮುಂದೆ ಅಧಿಕಾರಿಗಳಾಗ ಬಹುದು, ಜನಪ್ರತಿನಿಧಿಗಳಾಗಬಹುದು. ರೈತರಾಗಿ ವ್ಯವಸಾಯ ಮಾಡಬೇಕು. ಅದರಿಂದ ಬದುಕು ಹಸನಾಗುತ್ತದೆ. ನಮ್ಮ ಕೃಷಿ ಸಂಸ್ಕೃತಿ ವಿದ್ಯಾಸಂಸ್ಕೃತಿ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳಾಗಬೇಕು. ಸಂವಿಧಾನ ಓದಬೇಕು ಆ ನಿಟ್ಟಿನಲ್ಲಿ ಪೋಷಕಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹನುಮಂತಪ್ಪ ಅವರು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕು : ಮಕ್ಕಳು ಓದಿನ ಕಡೆ ಕೊಡುವ ಗಮನದಷ್ಟು ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ವಹಿಸಬೇಕು. ಯಾವುದೇ ಆಟವಾಗಿರಲಿ, ಕ್ರೀಡಾಕೂಟ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಸದಾ ಕ್ರಿಯಾಶೀಲರಾಗಿರಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅವರು ಕರೆ ನೀಡಿದರು.
ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು, ಈ ಶಾಲೆಯ ಬಹುತೇಕ ಎಲ್ಲಾ ಮಕ್ಕಳು ಒಂದಲ್ಲಾ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವುದನ್ನು ಶ್ಲ್ಯಾಘಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸೋಲು – ಗೆಲುವಿನ ಕಡೆ ಗಮನ ಹರಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಆದ್ಯತೆ ನೀಡುವಂತೆ ಹಿತ ನುಡಿದರು.
ಮಕ್ಕಳು ಪಠ್ಯವನ್ನು ಓದಿ ಪದವಿ ಪಡೆದರೆ ಸಾಲದು, ಪದವಿಗೆ ತಕ್ಕಂತೆ ಸಂಸ್ಕಾರವೂ ಮುಖ್ಯ ವಾಗಿರಬೇಕು. ಸುಸಂಸ್ಕೃತರಾದಾಗ ಮಾತ್ರ ನಾವು ಪಡೆದ ಪದವಿಗೆ ಅರ್ಥ ಬರಲು ಸಾಧ್ಯ ಎಂದು ಮಂಜುನಾಥ ಅಭಿಪ್ರಾಯಪಟ್ಟರು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರೂ ಆದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಆರ್. ರುದ್ರಮುನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಆರ್. ಮಂಜುನಾಥ ಹೆಗಡೆ, ಆಡಳಿತಾಧಿಕಾರಿ ಕೆ.ಬಿ.ಆನಂದ್, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆರ್. ಮೀನಾಕ್ಷಿ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಪ್ರಾರ್ಥನೆಯ ನಂತರ ಬಿ.ಸಿ. ರೇಣುಕಾರಾಧ್ಯ ಸ್ವಾಗತಿಸಿದರು. ಶ್ರೀಮತಿ ಲಕ್ಷ್ಮಿ ಅವರಿಂದ ವಂದನಾರ್ಪಣೆ, ಶ್ರೀಮತಿ ನಿರ್ಮಲಾ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.