ದಾವಣಗೆರೆ, ಫೆ.14- ದೇಶೀ ಗೋವಿನ ಮಹತ್ವ, ಗೋ ಆಧಾರಿತ ಕೃಷಿ, ಪರಿಸರ ಸಂರಕ್ಷಣೆ, ಲೋಕ ಕಲ್ಯಾಣದ ಉದ್ದೇಶವನ್ನು ಹೊತ್ತು 2024ರ ಡಿಸೆಂಬರ್ 30ರಿಂದ ಪ್ರಾರಂಭವಾಗಿರುವ ‘ನಂದಿ ರಥಯಾತ್ರೆ’ಯನ್ನು ಶುಕ್ರವಾರ ಸಂಜೆ ನಗರದ ವಿದ್ಯಾರ್ಥಿ ಭವನದಲ್ಲಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಗಣ್ಯರು ಜ್ಯೋತಿ ಬೆಳಗಿಸಿ, ಜೋಡಿ ನಂದಿಗಳಿಗೆ ನಂದಿ ಪೂಜೆ ನೆರವೇರಿಸಿದರು. ದೀಪಾ ಆರಾಧನೆ ಮಾಡಿದರು.
ನಂತರ ಪಿ.ಜೆ. ಬಡಾವಣೆಯಲ್ಲಿನ ಖಮಿತ್ಕರ್ ಶ್ರೀ ರಾಮ ಮಂದಿರದ ಆವರಣದಲ್ಲಿ ನಡೆದ ಸರಳವಾದ ವೇದಿಕೆ ಕಾರ್ಯಕ್ರಮದಲ್ಲಿ ಗೋವುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟ ಗೋ ಸೇವಾ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಜಿ. ಕುಮಾರಸ್ವಾಮಿ, ಗೋವುಗಳ ಸಂತತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದ್ದು, ಈ ದೇಶದಲ್ಲಿನ ಪ್ರತಿಯೊಂದು ಸಮಾಜ ಈ ಬಗ್ಗೆ ಜಾಗೃತರಾಗಿ ದೇಶಿಯ ಗೋ ತಳಿಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಸಂಘ ಚಾಲಕರಾದ ಜಯ ರುದ್ರೇಶ್, ಗೋ ಸೇವಾ ಸಂಯೋಜಕ್ ಶಿವಲಿಂಗಪ್ಪ, ಶಾಂತಕುಮಾರ್ ವಿ.ಪುರಾಣಿಕ ಮಠ, ಸತೀಶ್ ಪೂಜಾರ್, ರಮೇಶಣ್ಣ, ರುದ್ರಯ್ಯ, ವಿಶ್ವಾಸ್ ಹೆಚ್.ಪಿ ಉಪಸ್ಥಿತರಿದ್ದರು.