ನ್ಯಾಮತಿ: ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಸಚಿವ ಮಹದೇವಪ್ಪ
ನ್ಯಾಮತಿ, ಫೆ.14- ಶೈಕ್ಷಣಿಕವಾಗಿ ಬಂಜಾರ ಸಮಾಜದ ಪ್ರಗತಿಗಾಗಿ ನಮ್ಮ ಸರ್ಕಾರವು ಕ್ರಮ ವಹಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಅವರು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಹೊರವಲಯ ದಲ್ಲಿರುವ ಭಾಯಾಗಡ್ನ ಸೇವಾಲಾಲ್ ಜನ್ಮಸ್ಥಾನದ ಪುಣ್ಯಕ್ಷೇತ್ರದಲ್ಲಿ ಶುಕ್ರವಾರ ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆ, ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1ನೇ ತರಗತಿಯಿಂದ ಪಿಯುಸಿ ವರೆಗೆ ವಸತಿಯುತ ಶಾಲೆ ಆರಂಭಿಸಲು ಮನವಿ ಮಾಡಿದ್ದು, ಇದನ್ನು 2025-26ನೇ ಬಜೆಟ್ ನಲ್ಲಿ ಅನುನೋದನೆ ಪಡೆದು ಆರಂಭಿಸಲಾಗುವುದು. ಇದಕ್ಕಾಗಿ 40 ಕೋಟಿಗೂ ಅಧಿಕ ಅನುದಾನ ವೆಚ್ಚ ಮಾಡಲಾಗುತ್ತದೆ ಎಂದರು.
ಬಂಜಾರ ಸಮುದಾಯದ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸಿದ್ದರಾಮಯ್ಯ ಸರ್ಕಾರ ಮಾಡಿದೆ., ಇದಕ್ಕಾಗಿ 60 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಂಜಾರ ಸಮುದಾಯದವರು ಬೇರೆ ಬೇರೆ ಊರುಗಳಿಗೆ ವಲಸೆ ಹೋಗುವ ಜನಾಂಗವಾಗಿರುವ ಕಾರಣ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಪುಣ್ಯ ಕ್ಷೇತ್ರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಲಾಗುವುದು ಎಂದರು.
ಸಂತ ಸೇವಾಲಾಲ್ ಸಮುದಾಯ ಇಡೀ ಸಮಾಜಕ್ಕೆ ಮಾದರಿಯಾಗಿ, ಪ್ರಾಮಾಣಿಕವಾಗಿ ಹಾಗೂ ಸ್ವಂತ ಶ್ರಮದಿಂದ ಬದುಕುವ ಸ್ವಾಭಿಮಾನಿ ಜನ ಸಮುದಾಯವಾಗಿದೆ ಎಂದ ಅವರು, ಬಂಜಾರ ತಾಂಡಾಗಳಲ್ಲಿ 1500 ಸೇವಾಲಾಲ್ ಭವನ ನಿರ್ಮಿಸಲಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಅವರು ನೆಲೆಸಿರುವ ಈ ಕ್ಷೇತ್ರ ನಿಜಕ್ಕೂ ಪುಣ್ಯಕ್ಷೇತ್ರವಾಗಿದೆ. ಭಕ್ತರ ಅಭಿಲಾಷೆಯಂತೆ ಇದೀಗ ಸಾಕಷ್ಟು ಅಭಿವೃದ್ದಿಯಾಗಿದೆ. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅವರು ಈ ಭಾಗದಲ್ಲಿ ಜೋಗ- ಚಿನ್ನಿಕಟ್ಟೆಯಿಂದ ದ್ವಿಪಥ ರಸ್ತೆಗಾಗಿ ಮನವಿ ಮಾಡಿದ್ದು, ಈ ಬಾರಿಯ ಬಜೆಟ್ ನಲ್ಲಿ ರಸ್ತೆ ಅಭಿವೃದ್ದಿಗಾಗಿ ಅನುದಾನಕ್ಕೆ ಅನುನೋದನೆ ನೀಡಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಬಂಜಾರ ಸಮಾಜವಾಗಿದೆ. ಬಂಜಾರ ಸಮುದಾಯದ ಅಭಿವೃದ್ಧಿಗೆ ಎಲ್ಲಾ ಪಕ್ಷಗಳೂ ಸಹಕರಿಸಿವೆ. ನಮ್ಮ ತಂದೆಯವರು ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ತಾಂಡಾಭಿವೃದ್ಧಿ ನಿಗಮ ರಚಿಸಿ, ಗ್ರಾಮಗಳ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೂಡ ಭಾಯಗಡ್ಗೆ ರೈಲ್ವೆ ವ್ಯವಸ್ಥೆ ಕಲ್ಪಿಸಿ ಅದಕ್ಕೆ ಭಾಯಾಗಡ್ ರೈಲ್ವೆ ಸ್ಟೇಷನ್ ಎಂದು ನಾಮಕರಣ ಮಾಡುತ್ತಿದ್ದಾರೆ. ನಾನೂ ಕೂಡ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಶಿಕಾರಿಪುರ ಶಾಸಕನಾಗಲು ಬಂಜಾರ ಸಮುದಾಯದ ಕೊಡುಗೆ ಬಹಳಷ್ಟು ಇದೆ. ಈ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನಸಭೆಯ ಉಪಸಭಾಪತಿ, ಸಂತ ಸೇವಾಲಾಲ್ ಜನ್ಮ ಸ್ಥಾನ ಮಹಾ ಮಠದ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, ನಮ್ಮ ಬಂಜಾರ ಸಮಾಜದ ತಾಂಡಾ ನಿವಾಸಿಗಳ ವಲಸೆಯಿಂದ ಮಕ್ಕಳ ವಿದ್ಯಾಭ್ಯಾಸವು ಕುಂಠಿತವಾಗುತ್ತಿರುವುದನ್ನು ಮನಗಂಡು, ಮೊರಾರ್ಜಿ ವಸತಿ ಶಾಲೆ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಂತೆ ಪ್ರತ್ಯೇಕವಾಗಿ ವಸತಿ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಿದೆ. ಇದಕ್ಕಾಗಿ ಮಹಾಮಠದ 15 ಎಕರೆ ಜಮೀನನ್ನು ಸರ್ಕಾರಕ್ಕೆ ನೀಡಿ ಶೈಕ್ಷಣಿಕ ಪ್ರಗತಿಗೆ ಮುಂದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ಜಿ. ಶಾಂತನಗೌಡ ಮಾತನಾಡಿ, ಈ ಪ್ರದೇಶಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಚಿನ್ನಿಕಟ್ಟೆ ಗ್ರಾಮದಿಂದ ಹಳೇ ಜೋಗ ಗ್ರಾಮದವರೆಗೆ 10 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯದ ಮಣ್ಣು, ಜಲ ಸಂರಕ್ಷಣಾ ಸಚಿವ ಸಂಜಯ್ ಡಿ. ರಾಥೋಡ್ ಮಾತನಾಡಿದರು. ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್. ಜಯದೇವ ನಾಯ್ಕ್ ಸಂವಿಧಾನ ಪೀಠಿಕೆ ಬೋಧಿಸಿದರು.
ಲಿಂಗಸುಗೂರ ಶ್ರೀ ಸಿದ್ದಲಿಂಗ ಸ್ವಾಮೀಜಿ , ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾನಾಯ್ಕ, ಮಾಜಿ ಸಂಸದ ಉಮೇಶ್ ಜಾಧವ್, ತೆಲಂಗಾಣ ರಾಜ್ಯದ ಎಂಎಲ್ ಸಿ. ರಾಮುಲು, ಶಿರಹಟ್ಟಿ ಶಾಸಕ ಡಾ. ಚಂದ್ರು ಕೆ. ಲಮಾಣಿ, ಕೆಪಿಎಸ್ಸಿ ಸದಸ್ಯ ಭೋಜ್ಯನಾಯ್ಕ, ಮಾಜಿ ಸಚಿವರಾದ ಕೆ. ಶಿವಮೂರ್ತಿ, ಎಂ. ಪಿ. ರೇಣುಕಾಚಾರ್ಯ, ಮಾಜಿ ಎಂಎಲ್ಸಿ ಜಲಜಾನಾಯ್ಕ, ಮಾಜಿ ಶಾಸಕರಾದ ಎಂ. ಬಸವರಾಜನಾಯ್ಕ, ಪಿ. ರಾಜೀವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ. ಮಂಜಪ್ಪ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎನ್. ರಾಜು , ಸಂತ ಸೇವಾಲಾಲ್ ಜನ್ಮ ಸ್ಥಾನ ಮಹಾಮಠ ಸಮಿತಿಯ ಧರ್ಮದರ್ಶಿ ಬಿ. ಹೀರಾನಾಯ್ಕ, ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ಕಾರ್ಯದರ್ಶಿ ಎನ್. ಅರುಣ್ ಕುಮಾರ್, ಈಶ್ವರ್ ನಾಯ್ಕ್, ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಡಾ. ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ರವಿಚಂದ್ರ, ಯೋಜನ ನಿರ್ದೇಶಕ ಹರೀಶ್ ನಾಯ್ಕ , ವಾಗೀಶ್ ಲಮಾಣಿ , ಮಾರುತಿ ನಾಯ್ಕ , ಸುರೇಂದ್ರ ನಾಯ್ಕ , ಹೊನ್ನಾಳಿ ಉಪವಿಭಾಗದ ಉಪವಿಭಾಗಾಧಿಕಾರಿ ವಿ.ಅಭಿಷೇಕ್ , ನ್ಯಾಮತಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ , ಹೊನ್ನಾಳಿ ತಹಶೀಲ್ದಾರ್ ಪಟ್ಟರಾಜಗೌಡ , ಕೆ.ಎಂ.ಸಿ. ಮತ್ತು ಎ ಏಜೆನ್ಸಿಯ ವ್ಯವಸ್ಥಾಪಕರಾದ ಪ್ರಿಯಾ ಮತ್ತು ಸೋಮಶೇಖರ್ ಸೇರಿದಂತೆ, ಇತರರು ಇದ್ದರು.