ಹರಿಹರ, ಫೆ.12- ನಗರದ ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.
ಶ್ರೀ ಹರಿಹರೇಶ್ವರ ಸ್ವಾಮಿಗೆ ಮತ್ತು ಲಕ್ಷ್ಮೀ ದೇವಿಗೆ ನಾರಾಯಣ ಜೋಯಿಸರು, ಶ್ರೀನಿವಾಸ್ ಮೂರ್ತಿ, ಗುರುಪ್ರಸಾದ್ ಇವರ ನೇತೃತ್ವದಲ್ಲಿ ರುದ್ರಾಭಿಷೇಕ, ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ನಂತರ 10 ಗಂಟೆಗೆ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿ ರಥೋತ್ಸವದ ಸ್ಥಳಕ್ಕೆ ಕೊಂಡೊಯ್ಯಲಾಯಿತು.
ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಚೆನ್ನಬಸಪ್ಪ ಗೌಡ್ರು, ಸಾಧು ವೀರಶೈವ ಸಮಾಜದ ಅಧ್ಯಕ್ಷ ಮಹದೇವಪ್ಪ ಗೌಡ್ರು, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ದಿನೇಶ್ ಕೊಣ್ಣೂರ, ಮುಜರಾಯಿ ಇಲಾಖೆ ಆನಂದ್ ಇತರರು ರಥೋತ್ಸವದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ಡೊಳ್ಳು, ಡ್ರಮ್ ಸೆಟ್, ಬ್ಯಾಂಡ್ ಸೆಟ್, ಸಮಾಳ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರಗನ್ನು ನೀಡಿದವು. ರಥೋತ್ಸವಕ್ಕೆ ಭಕ್ತರು, ಬಾಳೆಹಣ್ಣು, ಕಲ್ಲುಸಕ್ಕರೆ, ಬಾದಾಮಿ, ಉತ್ತುತ್ತಿ, ಎಸೆಯುವ ಮೂಲಕ ಭಕ್ತಿ ಸಮರ್ಪಿಸಿ ದರು. ರಥೋತ್ಸವವು ತೇರುಗಡ್ಡೆಯಿಂದ ಆರಂಭ ಗೊಂಡು ರಾಣಿ ಚೆನ್ನಮ್ಮ ವೃತ್ತದ ವರೆಗೆ ಸಾಗಿ ಪುನಃ ತೆರುಗಡ್ಡೆಯ ಸ್ಥಳಕ್ಕೆ ಬಂದು ತಲುಪಿತು.
ಬಿರ್ಲಾ ಕಲ್ಯಾಣ ಮಂಟಪದ ಆವರಣದಲ್ಲಿ ಗಜಾನನ ಯುವಕ ಸಂಘದ ಅದ್ವೈತ ಶಾಸ್ತ್ರೀ, ರಾಘು ದೀಕ್ಷಿತ್ ಮತ್ತು ಶರತ್ ಕೊಣ್ಣೂರ, ಕಿರಣ್ ಕುಮಾರ್ ಕುಟುಂಬದವರು, ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗದವರು, ನಡವಲಪೇಟೆ ಯುವಕ ಸಂಘದ ಮೋಹನ್ ದುರುಗೋಜಿ, ಮಹೇಂದ್ರಕರ್ ಜಗದೀಶ್ ಇತರರು ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಬಿಸಿಬೇಳೆ ಬಾತ್, ಮೊಸರನ್ನ, ಕೊಸಂಬರಿ, ಮಜ್ಜಿಗೆ, ಪಾನಕವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಎಸ್ ರಾಮಪ್ಪ, ಅರ್ಜುನ್ ಬಿ.ಪಿ ಹರೀಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ಮಾಜಿ ತಾಪಂ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್, ಚಿದಂಬರ ಜೋಯಿಸರು, ಹರಿಶಂಕರ್ ಜೋಯಿಸರು, ಲಕ್ಷ್ಮೀಕಾಂತ ಜೋಯಿಸರು, ವಾರಿಜಾ ವೆಂಕಟೇಶ್, ವಿ.ಎ. ಸಂಗೀತ ಜೋಶಿ ಮತ್ತಿತರರು ಹಾಜರಿದ್ದರು.
ಹರಿಹರ ವೃತ್ತ ನಿರೀಕ್ಷಕ ಎಸ್ ದೇವಾನಂದ್, ಪಿಎಸ್ಐಗಳಾದ ವಿಜಯಕುಮಾರ್, ಪ್ರಭು ಕೆಳಗಿನ ಮನೆ, ಶ್ರೀಪತಿ ಗಿನ್ನಿ ಮತ್ತು ಸಿಬ್ಬಂದಿ ವರ್ಗದವರು ಬಂದೋಬಸ್ತ್ ಏರ್ಪಡಿಸಿದ್ದರು.