ಚಿತ್ರದುರ್ಗ, ಫೆ. 11 – ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ವೈ ಮಾನಿಕ ರಕ್ಷಣೆಗೆ ಆಧುನಿಕ ರೇಡಾರ್ ಅಳವಡಿಸುವ ಸಿದ್ಧತೆಗಳು ನಡೆದಿವೆ.
ರಷ್ಯಾದ ಅತ್ಯಾಧುನಿಕ ವೊರೊನೆಜ್ ರೇಡಾರ್ ಅಳವಡಿಕೆ ಮಾಡಲು ಆ ದೇಶದ ಜೊತೆ ಭಾರತ ನಡೆಸಿರುವ ಮಾತುಕತೆ ಮುಂಚೂಣಿ ಹಂತಕ್ಕೆ ತಲುಪಿದೆ. ಇದರಿಂದಾಗಿ ದೇಶದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವಾಗಲಿದೆ ಹಾಗೂ ವೈಮಾನಿಕ ನಿಗಾ ವ್ಯವಸ್ಥೆ ಹೆಚ್ಚಾಗಲಿದೆ.
ಸುಮಾರು 8 ಸಾವಿರ ಕಿಲೋಮೀಟರ್ ದೂರದಲ್ಲಿರುವ 500 ಸಂಖ್ಯೆವರೆಗಿನ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ಈ ರೇಡಾರ್ ಹೊಂದಿದೆ ಎಂದು ವರದಿಗಳು ತಿಳಿಸಿವೆ. ರಷ್ಯಾದ ವೊರೊನೆಜ್ – ಡಿಎಂ ಮಾದರಿಯ ರೇಡರ್ 8000 ಕಿಲೋಮೀಟರ್ ದೂರದಲ್ಲಿರುವ ಫುಟ್ಬಾಲ್ ಗಾತ್ರದ ವಸ್ತುವನ್ನು ಗುರುತಿಸಬಲ್ಲದು. ಇದು ಶೇ.40ರಷ್ಟು ಕಡಿಮೆ ಇಂಧನ ಬಳಸುತ್ತದೆ ಹಾಗೂ ಇದರ ಅಳವಡಿಕೆ ಶೇಕಡ 50 ರಷ್ಟು ವೇಗವಾಗಿದೆ. ಇದು ವಿಶ್ವದ ಅತ್ಯಂತ ಆಧುನಿಕ ಹಾಗೂ ಕಡಿಮೆ ವೆಚ್ಚದ ರೇಡಾರ್ ವ್ಯವಸ್ಥೆಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಖಂಡಾಂತರ ಕ್ಷಿಪಣಿ, ಸಮರ ವಿಮಾನ, ಉಪಗ್ರಹ ಹಾಗೂ ಇತರ ವೈಮಾನಿಕ ಬೆದರಿಕೆಗಳನ್ನು ಇದು ಗುರುತಿಸಬಲ್ಲದು. ಬೆದರಿಕೆ ಅತ್ಯಂತ ದೂರದಲ್ಲಿರುವಾಗಲೇ ಕ್ಷಿಪ್ರವಾಗಿ ಮಾಹಿತಿ ನೀಡಬಲ್ಲದು. ಇದು ಭಾರತದ ಮುಂಚೂಣಿ ಮುನ್ನೆಚ್ಚರಿಕೆಗೆ ಅನುಕೂಲಕರವಾಗಿದೆ.
ಈ ರೇಡಾರ್ ವ್ಯವಸ್ಥೆಯನ್ನು ಅಮೆರಿಕದ ಎಎನ್/ ಎಸ್‌ಪಿವೈ -6 ಹಾಗೂ ಸ್ಪೇಸ್ ಫೆನ್ಸ್‌ಗೆ ಹೋಲಿಕೆ ಮಾಡಲಾಗುತ್ತಿದೆ.
ಇದುವರೆಗೂ ರಷ್ಯಾ ಈ ರಕ್ಷಣಾ ವ್ಯವಸ್ಥೆಯನ್ನು ತನಗಾಗಿ ಮಾತ್ರ ಬಳಸಿಕೊಳ್ಳುತ್ತಿತ್ತು ಹಾಗೂ ಎಂದೂ ರಫ್ತು ಮಾಡಿರಲಿಲ್ಲ. ಭಾರತ ಹಾಗೂ ರಷ್ಯಾ ಈ ರೇಡಾರ್ ವ್ಯವಸ್ಥೆಯ ಖರೀದಿ ಮಾತುಕತೆಯಲ್ಲಿವೆ.
ಇದರ ಪ್ರತಿ ಘಟಕದ ವೆಚ್ಚ 34,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಈ ವ್ಯವಸ್ಥೆಯನ್ನು ಭಾರತದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಸಮುದ್ರ ಮಟ್ಟದಿಂದ 732 ಮೀಟರ್ ಎತ್ತರದಲ್ಲಿದೆ. ಇದರಿಂದಾಗಿ ರೇಡಾರ್ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು. ಹೀಗಾಗಿ ಚಿತ್ರದುರ್ಗವನ್ನು ಆಧುನಿಕ ರೇಡಾರ್ ಅಳವಡಿಕೆಗೆ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗದ ನಾಯಕನಹಟ್ಟಿ ಬಳಿಯ ಡಿಆರ್‌ಡಿಒ ಸಂಸ್ಥೆಯಲ್ಲಿ ರೇಡಾರ್ ಅಳವಡಿಕೆ ಮಾಡುವ ಸಿದ್ಧತೆಗಳು ನಡೆದಿದೆ ಎನ್ನಲಾಗಿದೆ.
ಅಲ್ಲದೆ ಚಿತ್ರದುರ್ಗದಲ್ಲಿ ಐಐಎಸ್‌ಸಿ, ಡಿಆರ್‌ಡಿಒ, ಇಸ್ರೋ ಹಾಗೂ ಬಿಎಆರ್‌ಸಿ ರೀತಿಯ ಸಂಸ್ಥೆಗಳಿವೆ. ಹೀಗಾಗಿ ರಕ್ಷಣೆ ಹಾಗೂ ಬಾಹ್ಯಾಕಾಶ ಯೋಜನೆಗಳ ಜೊತೆ ರೇಡಾರ್ ಅಳವಡಿಕೆ ಉಪಯುಕ್ತವಾಗಲಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರದುರ್ಗ ಮಾಜಿ ಸಂಸದ ಜನಾರ್ದನ ಸ್ವಾಮಿ, ಚಿತ್ರದುರ್ಗ ಭೌಗೋಳಿಕ ಅನುಕೂಲತೆಗಳನ್ನು ಹೊಂದಿದೆ ಹಾಗೂ ಸಾಕಷ್ಟು ಜಮೀನು ಲಭ್ಯವಿದೆ ಎಂದಿದ್ದಾರೆ.
ಈ ಯೋಜನೆ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಸ್ಥಳೀಯರಿಗೆ ಉದ್ಯೊಗಾವಕಾಶ ನೀಡಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.