ತರಳಬಾಳು ಹುಣ್ಣಿಮೆ ಎಂಟನೇ ದಿನದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ
ಭರಮಸಾಗರ, ಫೆ. 11- ನಮ್ಮ ನಾಡಿನಲ್ಲಿ ಯಾವುದೇ ಸಂಪನ್ಮೂಲದ ಕೊರತೆ ಇಲ್ಲ. ಬದ್ಧತೆ ಮತ್ತು ಶಿಸ್ತಿನ ಕೊರತೆ ಇರುವ ಕಾರಣ ಅಭಿವೃದ್ಧಿಯ ಹಿನ್ನಡೆ ಕಾಣುತ್ತಿದ್ದೇವೆ. ಸಮಗ್ರ ಕೃಷಿ ಪದ್ಧತಿ ಅನುಸರಿಸಿದ ರೈತ ಸಾಲಗಾರನಾಗಿಲ್ಲ. ಏಕ ಬೆಳೆ ಪದ್ಧತಿ ಅನುಸರಿಸುವ ರೈತ ಮಾತ್ರ ಸಮಸ್ಯೆ ಸುಳಿಗೆ ಸಿಲುಕಿದ್ದಾನೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಗೆರೆ ಜಗದ್ಗುರುಗಳು ಇಟ್ಟಿರುವ ಬೇಡಿಕೆಗಳನ್ನು ನಾಳೆಯೇ ಪರಿಶೀಲಿಸಿ, ಎಫ್‌ಎಒಗಳಿಗೆ ಬಿಡುಗಡೆಯಾಗ ಬೇಕಾದ ಒಂದು ಕೋಟಿ ಅರವತ್ತು ಲಕ್ಷ ರೂ. ಮತ್ತು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ 50 ಲಕ್ಷ ರೂ. ಅನು ದಾನವನ್ನು ಶೀಘ್ರವೇ ಬಿಡುಗಡೆ ಮಾಡ ಲಾಗುವುದು ಎಂದು ಭರವಸೆ ನೀಡಿದರು.
ರೈತ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಗೆ ಒಳಗಾಗಬಾರದು. ಸರ್ಕಾರ ಮತ್ತು ನಾವು ನಿಮ್ಮೊಂದಿಗೆ ಇದ್ದೇವೆ. ತರಳಬಾಳು ಶ್ರೀಗಳು ಕೆರೆಗಳಿಗೆ ನೀರು ತುಂಬಿಸುವ ಕಾಯಕವನ್ನು ಅತ್ಯಂತ ಕಾಳಜಿಯಿಂದ ಮಾಡುತ್ತಿದ್ದು, ಈ ಭಾಗದ ಬರಗಾಲಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಸರ್ಕಾರ ಸಹ ರಿವಾರ್ಡ್ ವಿಶ್ವ ಬ್ಯಾಂಕ್ ಯೋಜನೆಯಡಿ ರಾಜ್ಯದಲ್ಲಿ 1.24 ಕೋಟಿ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಕೇವಲ ಇಳುವರಿ ಆಸೆಗಾಗಿ ರೈತರು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡದೇ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿಯ ಸತ್ವ ಉಳಿಸಿಕೊಳ್ಳಬೇಕು ತನ್ಮೂಲಕ ಭೂಮಿಯ ಆರೋಗ್ಯ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5300 ಕೋಟಿ ರೂ. ಘೋಷಣೆ ಮಾಡಿದ್ದಾರೆಯೇ ಹೊರತು, ಇದುವರೆಗೂ ಮಂಜೂರು ಮಾಡದಿರುವುದು ವಿಪರ್ಯಾಸ. ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಈ ವಿಚಾರವನ್ನು ತರಳಬಾಳು ಜಗದ್ಗುರುಗಳ ಗಮನಕ್ಕೆ ತರಲಾಗಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೂ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಬೇರು ರೈತ
ಈ ಹಿಂದೆ ರೈತ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತಿತ್ತು. ಆದರೆ ರೈತ ದೇಶದ ನಿಜವಾದ ಬೇರು. ದೇಶಕ್ಕೆ ಅನ್ನ ಕೊಡುವ ಅನ್ನದಾತ. ಅವನಿಗೆ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ದೇವರ ಅನುಗ್ರಹ ಆದರೆ ಸಂಪತ್ತು ಬೆನ್ನ ಹಿಂದೆಯೇ ಬರುತ್ತದೆ. ಸಕಾಲಕ್ಕೆ ಮಳೆ ಬಂದು ಹಳ್ಳ, ಕೊಳ್ಳಗಳಿಗೆ ನೀರು ಬಂದರೆ ಕೆರೆಗಳು ತಾನಾಗಿಯೇ ತುಂಬುತ್ತವೆ. ಭಗವಂತನ ಕೃಪೆಯಿಂದ ಕೆರೆಗಳು ತುಂಬಿದರೆ ರೈತರಿಗೆ ಸಂಪತ್ತು ತಾನಾಗಿಯೇ ಒಲಿದು ಬರುತ್ತದೆ ಎಂದರು.
ನಮ್ಮದೇನು ಪವಾಡವಿಲ್ಲ. ಸರ್ಕಾರದ ಸಹಾಯದಿಂದ ಕೆರೆಗಳಿಗೆ ನೀರು ತುಂಬಿಸುವ ಕಾಯಕ ಮಾಡಿದ್ದೇವೆ. ಇದಕ್ಕಿಂತ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆ ನಿರ್ಮಾಣ ಕಾರ್ಯ ಅತ್ಯಂತ ದೊಡ್ಡದು ಎಂದು ಹೇಳಿದರು.
ನಿಜವಾದ ಭಗೀರಥರು ರಾಜೇಂದ್ರ ಸಿಂಗ್ ಅವರು. ಮಳೆ ನೀರು ತುಂಬಿಸುವ . ತರುಣ್ ಭಾರತ್ ಸಂಘ ಸ್ಥಾಪನೆ. ಮಳೆ ನೀರು ಕಣಿವೆಗಳಿರುವ ಜಾಗದಲ್ಲಿ ಒಂದು ಚೆಕ್ ಡ್ಯಾಂ ಮಾಡಿದ್ದಾರೆ. ಅವರ ಸಾಧನೆ ಮಹತ್ತರವಾದುದು ಎಂದರು.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ನೆರವಾದ ನಿಜವಾದ ಭಗೀರಥರು ತರಳಬಾಳು ಜಗದ್ಗುರುಗಳು. ಸರ್ಕಾರದ, ಜನಪ್ರತಿನಿಧಿಗಳ ಕಿವಿ ಹಿಂಡಿ ನೀರಾವರಿ ಯೋಜನೆಗಳನ್ನು ರೈತರಿಗೆ ತಲುಪಿಸುವ ಮತ್ತು ರೈತರ ಬಗ್ಗೆ ಅಪಾರ ಕಾಳಜಿಯ ಗಟ್ಟಿತನದ ಸ್ವಾಮೀಜಿ ಎಂದು ಬಣ್ಣಿಸಿದರು.
ಶಿಕ್ಷಣ, ಅನ್ನ ದಾಸೋಹ, ನೀರುಣಿಸುವ ಕೆಲಸ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತರಳಬಾಳು ಮಠ ಸಮಾಜಕ್ಕೆ ಮಾದರಿಯಾದುದು ಎಂದರು.
ರೈತರು ಕಾಯಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಕನಿಷ್ಠ ಪಕ್ಷ ಒಂದು ದೇಸಿ ತಳಿಯ ಹಸುವನ್ನು ಸಾಕುವಂತೆ ಕರೆ ನೀಡಿದರು.
ಮಹಾರಾಷ್ಟ್ರದ ಕನ್ನೇರಿ ಶ್ರೀ ಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನೀರು ಅಮೂಲ್ಯವಾದ ಸಂಪತ್ತು. ಇತಿ ಮಿತಿ ಬಳಕೆ, ಮರುಪೂರಣ ವ್ಯವಸ್ಥೆ ಅಗತ್ಯ ಎಂದರು.
ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣಿನಲ್ಲಿನ ಜೀವಾಣು ನಾಶ ಹೊಂದಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ಸಾವಯವ ಗೊಬ್ಬರ ಬಳಕೆ, ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಳೆ ಸಕಾಲಿಕವಾಗಿರದೇ ಅಕಾಲಿಕವಾಗಿದೆ. ನಿಸರ್ಗವನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ನೀರಿಲ್ಲದೆ ಬಂಜರು ಭೂಮಿಯಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ರೈತ ಜಮೀನಿನ ಸುತ್ತ ಕನಿಷ್ಟ ಒಂದು ಎಕರೆಗೆ 25 ಗಿಡಗಳನ್ನಾದರೂ ನೆಡಲೇಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇದೆ. ರೈತರು ಹಸುಗಳನ್ಜು ಸಾಕುವ ಜೊತೆಗೆ, ನೀರಿನ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕೃಷಿಗೆ ಜಲಸಂರಕ್ಷಣೆ ಅತಿ ಮುಖ್ಯ. ಈ ಕಾಯಕವನ್ನು ಸಿರಿಗೆರೆ ಸ್ವಾಮೀಜಿಯವರು ಮಾಡುತ್ತಿದ್ದು, ರೈತರು ದೇಶವನ್ನು ಆಹಾರ ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಈ ಹಿಂದೆ ಅರವತ್ತು ಕೋಟಿ ಜನರಿಗೆ ಆಹಾರ ಇರಲಿಲ್ಲ. ಆದರೆ ಈಗ 130 ಕೋಟಿ ಜನರಿಗೆ ಆಹಾರ ಕೊಟ್ಟು ವಿದೇಶಕ್ಕೂ ಕೊಡುತ್ತಿದ್ದೇವೆ. ಇದು ರೈತರ ಸಾಧನೆ, ಕೋವಿಡ್ ಸಂದರ್ಭದಲ್ಲಿ ಎಲ್ಲಾ ಕಾರ್ಖಾನೆಗಳು ಬಂದಾಗಿದ್ದರೂ, ರೈತರ ಕಾರ್ಖಾನೆ ಮಾತ್ರ ಬಂದ್ ಆಗಿರಲಿಲ್ಲ. ರೈತ ಮಾತ್ರ ಎಂದಿನಂತೆ ನಿತ್ಯ ಕಾಯಕದಲ್ಲಿ ತೊಡಗಿದ್ದು ವಿಶೇಷ ಎಂದರು.
ಕೊರೊನಾ ಸಂದರ್ಭದ ವೇಳೆ ಈ ದೇಶದ ವಾಸಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಕೆಲಸವನ್ನು ರೈತರು ಮಾಡಿದ್ದಾರೆ. ಜೊತೆಗೆ 84 ಸಾವಿರ ಕೋಟಿ ಜೀವ ರಾಶಿಗೂ ಅನ್ನ ನೀಡಿದರು. ಹಾಗಾಗಿ ರೈತರೇ ಈ ದೇಶದ ಮಾಲೀಕರು. ಮೌಲ್ಯವರ್ಧನೆ ಮಾಡಿದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಪಡಿಸಿದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಯಾವುದೇ ಕಾರಣಕ್ಕೂ ರೈತ ನೇಣಿಗೆ ಶರಣರಾಗಬಾರದು ಎಂದರು.
ತರಳಬಾಳು ಜಗದ್ಗುರುಗಳು ನಾಡಿನ ಕೆರೆಗಳಿಗೆ ನೀರು ತುಂಬಿಸಿ, ರೈತರ ಬಾಳನ್ನು ಹಸನುಗೊಳಿಸಿದ ಹೃದಯವಂತ ಗುರುಗಳು. ರೈತರ ಕಣ್ಣೀರು ಒರೆಸಿದ ಮಾತೃ ಹೃದಯಿ ಶ್ರೀಗಳ ಸೇವೆಯನ್ನು ಕೊಂಡಾಡಿದರು.
ಜಲ ಸಂರಕ್ಷಕ ಮತ್ತು ಸಾಫ್ಟವೇರ್ ಇಂಜಿನಿಯರ್ ಆನಂದ ಮಲ್ಲಿಗಾವಾಡ ಮಾತನಾಡಿ, ನೈಸರ್ಗಿಕವಾಗಿ ಕೆರೆಗಳ ನಿರ್ಮಾಣ ಮತ್ತು ಅವುಗಳ ಸಂರಕ್ಷಣೆ ಬಹುಮುಖ್ಯ. ಈ ನಿಟ್ಟಿನಲ್ಲಿ 12 ರಾಜ್ಯಗಳಲ್ಲಿ ನೈಸರ್ಗಿಕವಾಗಿ ಕೆರೆಗಳನ್ನು ನಿರ್ಮಿಸಲಾಗಿದೆ. ಜನಾಂದೋಲನದ ರೂಪದಲ್ಲಿ ಈ ಕಾರ್ಯವನ್ನು ಕೈಗೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಾಜಸ್ಥಾನದ ಭಾರತದ ಜಲಸಂರಕ್ಷಕ ಹಾಗೂ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಸಿಂಗ್, ಭಾರತೀಯ ಕೃಷಿ ತಂತ್ರಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿ. ವೆಂಕಟಸುಬ್ರಹ್ಮಣ್ಯಂ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಪುಣೆಯ ಸಂತ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಲಿಂಗ ಧವಳೇಶ್ವರ್ ಕೃಷಿ ಮತ್ತು ಜಲಸಂರಕ್ಷಣೆ ಕುರಿತು ಮಾತನಾಡಿದರು.
ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಸೇರಿದಂತೆ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು
ಆನಂದ ಆರ್. ಪಾಟೀಲ್ ವಚನಗೀತೆ ಹಾಡಿದರು. ಶಶಿ ಪಾಟೀಲ್ ಸ್ವಾಗತಿಸಿದರು. ಮಂಜನಗೌಡ ಶರಣು ಸಮರ್ಪಿಸಿದರು.