ರಾಜನಹಳ್ಳಿ ಪೀಠದಲ್ಲಿನ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್
ಮಲೇಬೆನ್ನೂರು, ಫೆ.8- ರಾಮಾಯಣವನ್ನು ಬರೆದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅರ್ಥೈಸಿ ಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಹಮ್ಮಿ ಕೊಂಡಿದ್ದ 7ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ಮೇಳ ಉದ್ಘಾಟಿಸಿ, ನಂತರ ನಡೆದ ಮಹಿಳಾ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳು ಕೇವಲ ಒಂದು ಸಮಾಜದ ಏಳಿಗೆಗಾಗಿ ಬದುಕಿದವರಲ್ಲ, ಸಮಸ್ತ ಜನತೆಯ, ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹಾನ್ ತಪಸ್ವಿಗಳಾಗಿದ್ದವರು. ರಾಮಾಯಣದಲ್ಲಿ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಮಠದ ಪೀಠಾಧೀಶರು ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲ್ಯಾಘಿಸಿದರು.
`ಬುಡಕಟ್ಟು ಮಹಿಳೆ ಸಬಲೀಕರಣ’ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದೇವದುರ್ಗ ಶಾಸಕರಾದ ಕರೆಮ್ಮ ಜಿ.ನಾಯಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಸ್ಟಿ, ಎಸ್ಟಿ ಮಕ್ಕಳಿಗೆ ಶಿಷ್ಯವೇತನ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರದ ಅನೇಕ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ. ರಾಜ್ಯ ಸಮಗ್ರ ಅಭಿವೃದ್ಧಿ ಹಿತ ದೃಷ್ಠಿಯಿಂದ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಮುಂದಾದಲ್ಲಿ ಒಳಿತೆಂದು ಅಭಿಪ್ರಾಯಪಟ್ಟ, ಕರೆಮ್ಮ ನಮ್ಮ ಸಮಾಜದವರೇಕೆ ಮುಖ್ಯಮಂತ್ರಿಗಳಾಗಬಾರದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಾಂತಲಾ ರಾಜಣ್ಣ ಮಾತನಾಡಿ, ವಾಲ್ಮೀಕಿ ಸಮಾಜದ ಮಹಿಳೆಯರು ತಮ್ಮ ಕಷ್ಟ ಕಾರ್ಪಣ್ಯಗಳು ಏನೇ ಇದ್ದರೂ ಅವುಗಳನ್ನು ಬದಿಗೊತ್ತಿ, ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ನಮ್ಮ ಸಮಾಜದ ಮುಖಂಡರು ವೈಷ್ಯಮ್ಯವನ್ನು ಬಿಟ್ಟು ಸಮಾಜದ ಒಳಿತಿಗಾಗಿ ಒಗ್ಗಟ್ಟಿನಿಂದಿದ್ದರೆ ಸಮಾಜದ ಅಭಿವೃದ್ಧಿ ಸಾಧ್ಯವೆದರು.
ಚಿಕ್ಕೋಡಿ ಸಂಸದರಾದ ಕು. ಪ್ರಿಯಾಂಕ ಜಾರಕಿಹೊಳಿ ಮಾತನಾಡಿ, 21ನೇ ಶತಮಾನವನ್ನು ದಾಟಿ 22ನೇ ಶತಮಾನಕ್ಕೆ ಕಾಲಿಡುತ್ತಿದ್ದರೂ ಸಹ ಇಂದಿಗೂ ನಾಡಿನಲ್ಲಿ ಅಸ್ಪೃಶತೆ ತಾಂಡವವಾಡುತ್ತದೆ. ಅದನ್ನು ಹೊಡೆದೋಡಿಸಲು ಮಹಿಳೆಯರು ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಸಮಾನತೆಯಿಂದ ಬದುಕಿದಲ್ಲಿ ಅಸ್ಪೃಶತೆ ಹೊಡೆದೋಡಿಸಲು ಸಾದ್ಯವೆಂದರು.
ಉಪನ್ಯಾಸ ನೀಡಿದ ಮೈಸೂರಿನ ಸಾಹಿತಿ ಡಾ. ಅನಸೂಯ ಕೆಂಪನಹಳ್ಳಿ ಮಾತನಾಡಿ, ಸಾವಿತ್ರಿ ಬಾಪುಲೆ, ಡಾ. ಅಂಬೇಡ್ಕರ್, ಪಾತೀಮಾ ಶೇಖ್ ಅವರು ಮಹಿಳೆಯರ ಸಮಾನತೆಗಾಗಿ ಹೋರಾಡಿದವರಾಗಿದ್ದು, ಅವರ ಹೋರಾಟಗಳ ಕುರಿತು ಮಹಿಳೆಯರು ಮಾಹಿತಿ ಅರಿಯಬೇಕು. ಮಹಿಳೆಯರು ರಾಜಕೀಯದಲ್ಲಿ ಬೆರಳೆಣಿಕೆಯಷ್ಟಿದ್ದಾರೆ. ದೇಶದಲ್ಲಿ ಈವರೆಗೆ 17 ಜನ ಮಹಿಳಾ ಮುಖ್ಯ ಮಂತ್ರಿಗಳಾಗಿದ್ದಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಇದುವರೆಗೂ ಆ ಭಾಗ್ಯವೇಕೆ ಕೂಡಿ ಬಂದಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.
ಸಂಡೂರು ಶಾಸಕರಾದ ಅನ್ನಪೂರ್ಣ ಈ ತುಕಾರಾಂ ಕಾರ್ಯಕರ್ಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಶಬರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಜಾತ್ರಾ ಸಮಿತಿಯ ಅಧ್ಯಕ್ಷ – ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ, ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ , ಮೇಯರ್ ಚಮನ್ ಸಾಬ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ.ವಾಗೀಶ್ ಸ್ವಾಮಿ, ಕುಕ್ಕವಾಡ ಮಂಜುನಾಥ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಕವಿತಾ ವಾರಂಗಲ್, ಹರಿಹರ ನಗರ ಸಭೆಯ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್, ಧರ್ಮದರ್ಶಿ ಕೆ.ಬಿ.ಮಂಜುನಾಥ, ಬಿ.ವೀರಣ್ಣ, ಡಿ.ಆರ್.ವಾಲ್ಮೀಕಿ, ನಾಗರಾಜಪ್ಪ ಹಳ್ಳಳ್ಳೆಪ್ಪನವರ, ಚಂದ್ರಪ್ಪ ಬೇಡರ, ಡಿ.ಬಿ. ಬಸವರಾಜಪ್ಪ, ಗದಗಿನ ಅಬಕಾರಿ ಉಪ ಆಯುಕ್ತರಾದ ಲಕ್ಷ್ಮಿ ಮಾರುತಿ ತೋಟಗಂಟಿ, ಕೋಲಾರದ ಸಹಾಯಕ ಕಮಿಷನರ್ ಡಾ. ಎಚ್.ಪಿ.ಎಸ್ ಮೈತ್ರಿ, ಡಾ. ಶೋಭಾ, ಶಿವಮೊಗ್ಗ ತಾಲ್ಲೂಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸವಿತಾ ಸಂಜಯ್, ವಿಜಯಶ್ರೀ ಮಹೇಂದ್ರಕುಮಾರ್, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ರಾಜನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಹೇಮಾವತಿ ಪರಶುರಾಮಪ್ಪ, ಉಪಾಧ್ಯಕ್ಷ ಎ.ಕೆ.ನಾಗೇಂದ್ರಪ್ಪ ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.