ರಾಣೆಬೆನ್ನೂರಿನಲ್ಲಿ `ಕರ್ನಾಟಕ ವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ’ ಉದ್ಘಾಟಿಸಿದ ಉಪರಾಷ್ಟ್ರಪತಿ
ಬೆಂಗಳೂರು, ಫೆ. 7 – ಇತ್ತೀಚಿನ ವರ್ಷಗಳಲ್ಲಿ ದೇಶ ವಿರೋಧಿ ಭಾವನೆಗಳಿಗೆ ನ್ಯಾಯಾಂಗದ ಮಾರ್ಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಇಂತಹ ಪರಿಸ್ಥಿತಿ ಕಂಡುಬಂದಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ದೇಶದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಯತ್ನವೂ ನಡೆದಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಆಯೋಜಿಸಲಾಗಿರುವ ಕರ್ನಾಟಕ ವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಉದ್ಘಾ ಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಭಜನಾತ್ಮಕ ಶಕ್ತಿಗಳು ಬೇರೆ ಬೇರೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಅವು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತವೆ ಹಾಗೂ ಹೊಸ ವಿಷಯಗಳನ್ನು ಕಂಡುಕೊಳ್ಳುತ್ತವೆ. ಇಂತಹ ಶಕ್ತಿಗಳು ಈಗ ನ್ಯಾಯಾಂಗದ ಕಡೆ ತಿರುಗಿವೆ ಎಂದು ಧನಕರ್ ಹೇಳಿದರು.
ನಮ್ಮ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಾಂಗದ ವ್ಯವಸ್ಥೆಯಲ್ಲಿ ಹಕ್ಕು ನೀಡಿದೆ. ಪ್ರತಿಯೊಬ್ಬ ವ್ಯಕ್ತಿ ನ್ಯಾಯಾಂಗದ ನೆರವು ಪಡೆಯಬಹುದು. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇಶ ವಿರೋಧಿ ಭಾವನೆಗಳನ್ನು ಸೃಷ್ಟಿಸಲು ಹಣ ಬಳಸಲಾಗುತ್ತಿದೆ. ಸಾರ್ವಜನಿಕರಿಗೆ ನೀಡಲಾಗಿರುವ ನ್ಯಾಯಾಂಗ ಮಾರ್ಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಬೇರೆ ಯಾವುದೇ ದೇಶದಲ್ಲೂ ಈ ರೀತಿ ನಡೆಯುತ್ತಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು.
ಈ ಶಕ್ತಿಗಳು ರಾಷ್ಟ್ರವಾದ ಹಾಗೂ ಪ್ರಾಂತಿಯವಾದದ ನಡುವೆ ಘರ್ಷಣೆ ಸೃಷ್ಟಿಸಲು ಪ್ರಯತ್ನ ನಡೆಸಿವೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಡೆಗಣಿಸುವ ಯತ್ನ ನಡೆಸಿವೆ. ಇಂತಹ ಶಕ್ತಿಗಳಿಗೆ ಪ್ರಬಲವಾದ ಪ್ರತಿಕ್ರಿಯೆ ನೀಡಬೇಕು ಎಂದವರು ಕರೆ ನೀಡಿದರು.
ಭಾರತದ ಆರ್ಥಿಕ ಬೆಳವಣಿಗೆ ಕುರಿತು ಮಾತನಾಡಿದ ಅವರು, ಐಎಂಎಫ್, ವಿಶ್ವ ಬ್ಯಾಂಕ್ ಮತ್ತಿತರರು ಭಾರತವನ್ನು ಮಿನುಗು ತಾರೆಯಾಗಿ ನೋಡುತ್ತಿದ್ದಾರೆ. ಭಾರತವು ಹೂಡಿಕೆ, ಅವಕಾಶ ಹಾಗೂ ಪ್ರತಿಭೆಯ ತಾಣ ಎಂದು ಗುರುತಿಸಲಾಗುತ್ತಿದೆ. ಹೂಡಿಕೆ ಹಾಗೂ ಅವಕಾಶಗಳಿಗೆ ಭಾರತ ಜಾಗತಿಕ ತಾಣವಾಗಿದೆ ಎಂದವರು ತಿಳಿಸಿದರು.
ಕರ್ನಾಟಕದ ಸಂಸ್ಕೃತಿ ಭಾರತದ ಸಂಸ್ಕೃತಿಯಲ್ಲಿ ಅಂತರವಿಲ್ಲ. ಇಲ್ಲಿನ ಸಂಸ್ಕೃತಿಯ ವೈಭವ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಆಶಯ ಭಾಷಣ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ಇಂದು ದೇಶಾದ್ಯಂತ ಭಿನ್ನತೆ, ನಾವೆಲ್ಲಾ ಭಿನ್ನರು, ಪ್ರಾದೇಶಿಕತೆ ಇದೆ, ಸಮಾನತೆ ಇಲ್ಲ ಎನ್ನುವ ಖಿನ್ನತೆಯ ಭಾವನೆಗಳನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಇಲ್ಲಿ ಭಿನ್ನತೆ ಇಲ್ಲ, ಈ ಕಾರ್ಯಕ್ರಮಗಳಿಂದ ನಾವೆಲ್ಲ ಒಂದು ಎನ್ನುವುದನ್ನು ಸಾಬೀತು ಪಡಿಸುತ್ತಿದ್ದೇವೆ ಎಂದು ಹೇಳಿ, ನಮ್ಮ ಕಲೆ, ಸಂಸ್ಕೃತಿ, ಭಕ್ತಿ ಇದೆಲ್ಲವು ನಮ್ಮ ಜೀವನದ ದರ್ಶನ. ಇದನ್ನು ಶ್ರೀಮಂತಗೊಳಿಸುವಲ್ಲಿ ನಾವು ಸದಾ ಸನ್ನದ್ಧರಾಗಿರುತ್ತೇವೆ ಎಂದರು.
ವೇದಿಕೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಅಧ್ಯಕ್ಷ ವಚನಾನಂದ ಶ್ರೀಗಳು, ಉಪ ರಾಷ್ಟ್ರಪತಿಗಳ ಶ್ರೀಮತಿ ಡಾ. ಸುದೇಷ್ಟಾ ಧನಕರ್, ಮೈಸೂರು ಮುಕ್ತ ವಿವಿಯ ಕುಲಪತಿ ಪ್ರೊ. ಎಸ್.ವಿ. ಹಲಸೆ, ಪ್ರಜ್ಞಾ ಪ್ರವಾಹದ ಸಂಯೋಜಕ ರಘುನಂದನ ಸಂಯೋಜಕ ಕೆ.ಎನ್. ಪಾಟೀಲ ಹಾಗೂ ಸಚಿವ ಮಂಕಾಳೆ ವೈದ್ಯ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ, ರಾಜ್ಯಪಾಲರಿಗೆ ಇಲ್ಲಿನ ಉತ್ಕೃಷ್ಟ ಉಣ್ಣೆಯ ಕಂಬಳಿಗಳನ್ನು ಹೊದಿಸಿ, ಏಲಕ್ಕಿ ಮಾಲೆಗಳಿಂದ ಗೌರವಿಸಲಾಯಿತು.ಉಪರಾಷ್ಟ್ರಪತಿಗಳ ಶ್ರೀಮತಿಗೆ ರೇಶ್ಮೆ ಸೀರೆ ಹಾಗೂ ಏಲಕ್ಕಿ ಮಾಲೆ ಹಾಕಿ ಗೌರವಿಸಲಾಯಿತು.