ನಾನೂ ಅಲ್ಲ, ನೀನೂ ಅಲ್ಲ. ಎಲ್ಲರೂ ಸಮಾನರು. ಸರ್ವವೂ ಸೃಷ್ಟಿಯಿಂದ ಬಂದಿದೆ. ಇದನ್ನರಿತು ನಾವೆಲ್ಲಾ ಸುಖವಾಗಿ ಬಾಳಿ ಬದುಕಬೇಕಿದೆ. ಪರಸ್ಪರ ಒಳಿತು ಬಯಸಲು ಸಕಾರಾತ್ಮಕ ನಿಲುವುಗಳನ್ನು ಹೊಂದಬೇಕು. ಒಬ್ಬರ ಉನ್ನತಿಗೆ ಮತ್ತೊಬ್ಬರ ಕೈ ಜೋಡಿಸುತ್ತಾ ಹೋದರೆ ದೇಶ ಉನ್ನತಿಯಾಗುತ್ತದೆ.
– ಉಮಾಶ್ರೀ, ವಿಧಾನ ಪರಿಷತ್ ಸದಸ್ಯೆ
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಷಣಕಾರ್ತಿ ಸಂಧ್ಯಾ ಶೆಣೈ
ದಾವಣಗೆರೆ, ಫೆ.5- ಮತ್ತೊಬ್ಬರ ಚಿಕ್ಕ ಪುಟ್ಟ ತಪ್ಪುಗಳನ್ನೇ ಹೇಳುತ್ತಾ, ಅವರನ್ನು ನಿಂದಿಸುತ್ತಾ ನಮ್ಮ ಜೀವನ ಹಾಳು ಮಾಡಿಕೊಳ್ಳುವ ಬದಲು, ವಿರಸವನ್ನು ಮರೆತು ಇದ್ದುದರಲ್ಲೇ ಸಂತಸದಿಂದ ಬದುಕುವುದನ್ನು ಕಲಿಯೋಣ ಎಂದು ಉಡುಪಿಯ ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ ಹೇಳಿದರು.
ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದ್ವೇಷ, ಅಸೂಯೆಯಿಂದ ಒಬ್ಬರನ್ನು ಹಿಂದಕ್ಕೆ ತಳ್ಳಬೇಕೆಂಬ ಉದ್ದೇಶದಿಂದ ಎಲ್ಲವನ್ನೂ ತ್ಯಾಗ ಮಾಡುತ್ತಿದ್ದೇವೆ. ನಮ್ಮ ಯಶಸ್ಸಿಗೆ ಮತ್ತೊಬ್ಬರನ್ನು ತುಳಿಯುವ ಅಗತ್ಯವಿಲ್ಲ. ಎಲ್ಲಾ ಸಂತೋಷಗಳನ್ನು ಅನುಭವಿಸುತ್ತಾ ಮುಂದೆ ಸಾಗಲು ಸಾಧ್ಯವಿದೆ ಎಂದು ಹೇಳಿದರು.
ಮಂಥರೆಗೆ ಅಪಮಾನ ಮಾಡಿದ್ದ ಕಾರಣ ಆಕೆ ಕೈಕೆಯ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಗೌರವ ಕೊಡದೆ ಮಾಡಿದ ಅಪಮಾನದ ಬೆಂಕಿ ಇಡೀ ರಾಮಾಯಣಕ್ಕೆ ಕಾರಣವಾಯ್ತು. ಅಂತಹ ಮಂಥರೆ, ಕೈಕೆಯವರು ಪ್ರಪಂಚಕ್ಕೆ ಬೇಕಿಲ್ಲ ಎಂದು ಹೇಳಿದರು.
ಇನ್ನೊಬ್ಬರ ಬೆನ್ನು ತಟ್ಟಿ ಅವರಲ್ಲಿರುವ ಉತ್ತಮ ಗುಣವನ್ನು ಪ್ರೋತ್ಸಾಹಿಸಿದರೆ, ಎಲ್ಲಿಯೂ ಕೈಕೆ, ಮಂಥರೆಯರು ತಯಾರಾಗುವುದಿಲ್ಲ. ನಾವೆಲ್ಲಾ ಬದುಕುತ್ತಿರುವುದು ಒಂದು ಮುಷ್ಠಿ ಪ್ರೀತಿಗಾಗಿ. ಅದಕ್ಕಾಗಿ ಏನನ್ನೂ ಖರ್ಚು ಮಾಡಬೇಕಿಲ್ಲ. ಆ ಪ್ರೀತಿಯನ್ನು ಭರಪೂರವಾಗಿ ಸುತ್ತ ಮುತ್ತಲಿನವರಿಗೆ ನೀಡಬೇಕಿದೆ ಎಂದರು.
ನಮ್ಮ ಮಕ್ಕಳು ಏನಾಗಬೇಕೋ ಅದನ್ನು ನಾವು ಮಾಡಿ ತೋರಿಸಬೇಕು. ಆನಂತರವೂ ಮಗು ಅದನ್ನು ಮಾಡದಿದ್ದರೆ ಮಾತ್ರ ಅದಕ್ಕೆ ದಂಡಿಸುವ ಹಕ್ಕು ನಮಗಿರುತ್ತದೆ. ನಾವೇ ಹೆಚ್ಚು ಟಿವಿ, ಮೊಬೈಲ್ ನೋಡುತ್ತಾ, ಮಗುವಿಗೆ ಓದು ಎಂದರೆ ಕೇಳುತ್ತದೆಯೇ? ಎಂದು ಪ್ರಶ್ನಿಸಿದರು.
ರಾಜಕೀಯದಲ್ಲಿ ಶೇ.33 ಮೀಸಲಾತಿ ಕೊಡಿ: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಟ್ಟರೆ ನಮ್ಮ ಸ್ವಂತಿಕೆ, ಸಾಮರ್ಥ್ಯ ತೋರಿಸಲು ಅವಕಾಶ ಸಿಗುತ್ತದೆ ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಹೇಳಿದರು.
ಸುಮಾರು ವರ್ಷಗಳಿಂದ ತರಳಬಾಳು ಉತ್ಸವ ನಡೆಸಲಾಗುತ್ತಿದೆ. ಅದರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಗೋಷ್ಠಿ ನಡೆಸುತ್ತಿರುವುದು ಸಂತಸ ತಂದಿದೆ. ಈ ಮಹೋತ್ಸವ ಸರ್ವ ಧರ್ಮಗಳ ಶರಣೋತ್ಸವವಾಗಿದೆ ಎಂದರು.
ವಯಸ್ಸಿನ ಪರಿವೇ ಇಲ್ಲದೆ ಶೋಷಣೆ: ಬದುಕು ರೂಪಗೊಂಡಿರುವುದೇ ಸ್ತ್ರೀ ಪುರುಷರ ಸಮಾಗಮದಿಂದ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಪರಸ್ಪರ ಹೊಂದಾಣಿಕೆಯಿಂದ ಕುಟುಂಬದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಕೊಪ್ಪಳ ಇರಕಲಗಡ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ.ನಾಗಪುಷ್ಪಲತಾ ಹೇಳಿದರು.
ಸಂಸ್ಕೃತಿ, ಪರಂಪರೆ, ಧರ್ಮ, ಆಚಾರ ವಿಚಾರ, ನೋವು, ನಲಿವು ಎಲ್ಲದರ ಭಾಗವಾಗಿ ಕಂಡು ಬರುತ್ತಾಳೆ ಮಹಿಳೆ. ಆದರೆ ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ವಯಸ್ಸಿನ ಪರಿವೇ ಇಲ್ಲದೆ ಶೋಷಣೆ, ಅತ್ಯಾಚಾರ ನಡೆಯುತ್ತಿದೆ ಇದು ನೋವಿನ ವಿಚಾರ ಎಂದರು.
ನಮ್ಮ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಿದೆ. ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರವನ್ನೂ ತಿಳಿಸಿಕೊಟ್ಟಾಗ, ಜೊತೆಗೆ ಮಹಿಳೆಯರನ್ನು ಪೂಜಿಸುವುದು ಬೇಡ, ಕನಿಷ್ಟ ಅವಳೂ ಮನುಷ್ಯಳು ಎಂದು ಭಾವಿಸಿದಲ್ಲಿ ಸ್ವಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಮಹಿಳೆಯರ ಹೋರಾಟ ಗಂಡು ಮಕ್ಕಳ ವಿರುದ್ಧವಲ್ಲ: ಮಹಿಳೆಯರು ಹಕ್ಕುಗಳ ಕುರಿತು ಹೋರಾಟ ಮಾಡುವ ಸಂದರ್ಭದಲ್ಲಿ ಅದು ಗಂಡು ಮಕ್ಕಳ ವಿರುದ್ಧದ ಹೋರಾಟ ಎಂದು ಯಾರೂ ಭಾವಿಸಬಾರದು ಎಂದು ಧಾರವಾಡ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯ ಪ್ರಭು ತಿಳಿಸಿದರು.
ಹೆಣ್ಣು ಮಕ್ಕಳು ಓದಲು ಆರಂಭಿಸಿದ್ದು 60-70 ವರ್ಷಗಳಿಂದೀಚೆ ಅಷ್ಟೆ. ಆದರೆ ಗಂಡು ಮಕ್ಕಳು 2 ಸಾವಿರ ವರ್ಷಗಳಿಂದಲೂ ಶಿಕ್ಷಣ ಪಡೆಯುತ್ತಿದ್ದರು. ಈ ಅಂತರವನ್ನು ತುಂಬಿಕೊಳ್ಳಬಹುದು ಯಾವ ರೀತಿ ಶ್ರಮ ಪಡಬೇಕು ಎಂದು ಚಿಂತಿಸಬೇಕಿದೆ ಎಂದರು.
ಒಂದು ಹೆಣ್ಣಿಗೆ ಶಿಕ್ಷಣ ನೀಡಿದರೆ ಅದು ಇಡೀ ಕುಲಕ್ಕೆ ಶಿಕ್ಷಣ ಕೊಡಿಸಲು ದಾರಿ ಮಾಡಿಕೊಡುತ್ತದೆ. ಆದರೆ ಈಗಲೂ ಸಮಾಜದಲ್ಲಿ ಗಂಡು ಮಕ್ಕಳೇ ಬೇಕು ಎಂದು ಅಪೇಕ್ಷಿಸುತ್ತಿರುವುದು ವಿಷಾದನೀಯ ಎಂದರು.
ಶೋಷಣೆ ನಡೆದರೆ ಪೊಲೀಸರಿಗೆ ತಿಳಿಸಿ : ಮಹಿಳೆಯರಿಗೆ ಎಷ್ಟೇ ಅಪಮಾನಗಳಿದ್ದರೂ ಎದುರಿಸಿ ನಿಲ್ಲುವ ಶಕ್ತಿ ಇರಬೇಕು. ಶೋಷಣೆಗೆ ಒಳಗಾಗಬೇಡಿ. ಯಾರಾದರೂ ನಿಮ್ಮನ್ನು ಶೋಷಣೆಗೆ ಗುರಿಪಡಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅಂಜಿಕೊಳ್ಳದೇ ದೂರು ಸಲ್ಲಿಸಿ ಎಂದು ಹೇಳಿದರು. ಮಹಿಳೆಯರೂ ಯಾರೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಕಿವಿ ಮಾತು ಹೇಳಿದರು.
ಯಾವುದೇ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಮಹಿಳೆ ಪ್ರಾರ್ಥನೆ ಹೇಳಲು, ಹೂಗುಚ್ಚ ಕೊಡಲು ಮಾತ್ರ ಸೀಮಿತಳಾಗಿದ್ದಾಳೆ. ಈ ಕೆಲಸವನ್ನು ಪುರುಷರೂ ಮಾಡಲಿ ಎಂದರು.
ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದೆ. 800 ಲಕ್ಷ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ನಡೆದಿರುವುದು ಕಳವಳ ಕಾರಿ ಸಂಗತಿ. ಎಲ್ಲದಕ್ಕೂ ಮಹಿಳೆ ಬೇಕು. ಅವರೇ ಇಲ್ಲದಿದ್ದರೆ ಪ್ರಪಂಚ ನಡೆಯುವುದಾದರೂ ಹೇಗೆ? ಎಂದವರು ಪ್ರಶ್ನಿಸಿದರು.
ಚಾಮರಾಜ ನಗರ ಎಸ್ಪಿ ಡಾ.ಬಿ.ಟಿ. ಕವಿತಾ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಬಿ.ವಿ. ಗೀತಾ, ಸಾಹಿತಿ ಶಾಲಿನಿ ಶ್ರೀ ಶೈಲ ದೊಡ್ಡಮನಿ ಉಪಸ್ಥಿತರಿದ್ದರು. ಶಾಂತಮ್ಮ ಭರಮಸಾಗರ ಸ್ವಾಗತಿಸಿದರು.
ಸಿರಿಗೆರೆ ಅಕ್ಕನ ಬಳಗವದರು ವಚನ ಗೀತೆ ಹಾಡಿದರು. ತರಳಬಾಳು ಕಲಾಸಂಘದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಶರಣ ಸಂಕುಲ-ವೈರಾಗ್ಯನಿಧಿ ಅಕ್ಕಮಹಾದೇವಿ ನೃತ್ಯ ರೂಪಕ, ಭರತನಾಟ್ಯ ನಡೆಸಿಕೊಟ್ಟರು.