ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ
ದಾವಣಗೆರೆ, ಜ. 26 – ಮಹಾನಗರ ಪಾಲಿಕೆಯ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದ್ದು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಾದರೂ ಚುನಾವಣೆ ನಡೆಸುವ ಸಾಧ್ಯತೆ ಇರುವುದರಿಂದ ಚುನಾವಣೆ ಎದುರಿಸಲು ಸಿದ್ದರಾಗುವಂತೆ ಕಾರ್ಯಕರ್ತರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು, 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ವಾರ್ಡ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ನಿರ್ದೇಶನದಂತೆ ನಾವುಗಳು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸಜ್ಜಾಗಿದ್ದು, ಕಾರ್ಯಕರ್ತರು ತಮ್ಮ ತಮ್ಮ ವಾರ್ಡ್‍ಗಳಲ್ಲಿ ಪಕ್ಷದ ಮುಖಂಡರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉತ್ತಮ ಸರ್ಕಾರ ಹಾಗೂ ಪಕ್ಷದ ಸಂಘಟನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಕಾರಣ ಮಹಾನಗರ ಪಾಲಿಕೆಗೆ ಚುನಾವಣೆ ನಡೆದರೆ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಪಾಲಿಕೆ ಮಹಾಪೌರರಾದ ಕೆ. ಚಮನ್‍ಸಾಬ್ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳು ಪ್ರತಿ ಕುಟುಂಬಕ್ಕೂ ತಲುಪಿದ್ದು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರನ್ನು ಪಕ್ಷ ಗುರುತಿಸಲಿದೆ ಎಂದು ಉದಾಹರಣೆ ಮೂಲಕ ವಿವರಿಸಿದರು.
ಉಪ ಮಹಾಪೌರರಾದ ಸೋಗಿ ಶಾಂತಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸುಭಾನ್ ಸಾಬ್, ಇಂಟಕ್ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಮತ್ತಿತರರು ಮಾತನಾಡಿದರು.
ದಕ್ಷಿಣ ನಗರ ಘಟಕದ ಅಧ್ಯಕ್ಷ ಅಯೂಬ್ ಅಧ್ಯಕ್ಷತೆ ವಹಿಸಿದ್ದರು.