ಬೆಂಗಳೂರು, ಜ. 16 – ಇಲ್ಲಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ 217ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ವರ್ಷ ವಿಶ್ವದ ಮೇರು ಕೃತಿಗಳಲ್ಲಿ ಒಂದಾದ ಶ್ರೀಮದ್ ರಾಮಾಯಣ ಮಹಾಕಾವ್ಯ ರಚಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನಗಾಥೆ ಯನ್ನು ವಿಶ್ವದ ವಿವಿಧ ಬಗೆಯ 32 ಲಕ್ಷ ಹೂಗಳಿಂದ ಅಲಂಕರಿಸಿದ ಫಲಪುಷ್ಪ ಪ್ರದರ್ಶನವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಶ್ರೀ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ ಗರುಡಾಚಾರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ಸೇರಿ ದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.
ಈ ಫಲಪುಷ್ಪ ಪ್ರದರ್ಶನ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಲಿದೆ. ಈ ಬಾರಿಯೂ ಜ. 16 ರಿಂದ ಶುರುವಾಗಿ ಸತತ ಹತ್ತು ದಿನಗಳ ಕಾಲ ಪ್ರದರ್ಶನ ಇರಲಿದೆ. ಈ ಪ್ರದರ್ಶನವು ಗಣರಾಜ್ಯೋತ್ಸವ ದಿನದಂದು ಮುಕ್ತಾಯಗೊಳ್ಳಲಿದೆ.
ಪ್ರತಿ ವರ್ಷ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಒಬ್ಬೊಬ್ಬ ಮಹನೀಯರ ಬಗ್ಗೆ ಅಥವಾ ದೇಶದ ಪ್ರತಿಷ್ಠಿತ ಸ್ಮಾರಕಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗುವುದು. ಅದೇ ರೀತಿ ಈ ಬಾರಿ ಮಹರ್ಷಿ ವಾಲ್ಮೀಕಿಯವರ ವಿಷಯಾಧಾರಿತ ಪ್ರದರ್ಶನವನ್ನು ಇಂದಿನ ಮಕ್ಕಳಿಗೆ ರಾಮಾಯಣದ ಬಗ್ಗೆ ಹೂವಿನ ಕಲಾಕೃತಿಗಳ ಮೂಲಕ ಭಿನ್ನ ರೀತಿಯಲ್ಲಿ ತಿಳಿಸುವ ತೋಟಗಾರಿಕೆ ಇಲಾಖೆಯ ಪ್ರಯತ್ನವನ್ನು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.