ಸೀತಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆೆರೆ, ಜ. 14- ವಿದ್ಯಾರ್ಥಿಗಳು ಮೊಬೈಲನ್ನು ಕೇವಲ ಮನೋರಂಜನೆಗೆ ಬಳಕೆ ಮಾಡದೇ ಜ್ಞಾನ ಸಂಪಾದನೆಗೆ ಬಳಕೆ ಮಾಡಿಕೊಳ್ಳಬೇಕು. ಗ್ರಂಥಾಲಯದ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ವಿಕಾಸ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ, ಬಾವಿಯಲ್ಲಿನ ಕಪ್ಪೆಯಾಗದೇ ಜಾಗತಿಕ ವಿದ್ಯಮಾನಗಳ ಬಗ್ಗೆ ಅರಿವು ಹೊಂದುವ ಅವಶ್ಯವಿದೆ ಎಂದರು.
ಸಮಾಜ ಸೇವಾ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿ ಕೂಡ. ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರ್ದಿಷ್ಟ ಗುರಿ, ಓದುವ ಛಲ ಇದ್ದರೆ ಸಾಧನೆ ಸುಲಭವಾಗುತ್ತದೆ. ನಿತ್ಯ ದಿನಚರಿ ಬರೆಯುವ ರೂಢಿ ಮಾಡಿಕೊಂಡು, ಹೊಸ ವರ್ಷಕ್ಕೆ ಕೆಲವು ನಿರ್ಣಯಗಳನ್ನಾದರೂ ಪೂರೈಸುವ ಪ್ರಯತ್ನ ಮಾಡಬೇಕೆಂದು ಹಿತ ನುಡಿದರು.
ಕಾಲೇಜಿನ ಕಾರ್ಯಕ್ರಮಗಳಿಗೆ ಬಂದ ಅತಿಥಿ ಗಣ್ಯರ ಭಾಷಣದ ವಿಚಾರಗಳನ್ನು ಮನೆ ಯಲ್ಲಿ ಪೋಷಕರೊಂದಿಗೆ ಹಂಚಿಕೊಳ್ಳಬೇಕು. ಸ್ನೇಹ ಗುಣದ ಜೊತೆಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕೆಂದರು.
ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮುಂಬ ರುವ ದಿನಗಳಲ್ಲಿ ಸಂವಿಧಾನ ಪೀಠಿಕೆಯ ಅರ್ಥ, ಹಕ್ಕುಗಳು, ಜನಪ್ರತಿನಿಧಿಗಳ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ. ಕರಿಸಿದ್ಧಪ್ಪ, ಪ್ರಾಚಾರ್ಯ ಟಿ.ಎ. ಕುಸಗಟ್ಟಿ, ಉಪ ಪ್ರಾಚಾರ್ಯ ಎ.ಆರ್. ಮಂಜಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್, ಸದಸ್ಯ ಮಂಜುನಾಥ್, ಸುರೇಶ್, ರಾಘವೇಂದ್ರ, ಮಂಜುಳಾ ಮತ್ತಿತರರಿದ್ದರು.
ಅನುಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ಬಿ. ಪಾಲಾಕ್ಷಿ ಮಾತನಾಡಿದರು.