ಹಿರಿಯರ ಆದರ್ಶಗಳೇ ನಮ್ಮ ಜೀವನಕ್ಕೆ ಮಾರ್ಗದರ್ಶನ

ಹಿರಿಯರ ಆದರ್ಶಗಳೇ ನಮ್ಮ ಜೀವನಕ್ಕೆ ಮಾರ್ಗದರ್ಶನ

ದತ್ತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಜ.12- ಹಿರಿಯರ ಆದರ್ಶಗಳೇ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನ ಆಗಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಗುರು ಬಸವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಲಿಂ. ಕೆ.ಜಿ. ಪರಮೇಶ್ವರಪ್ಪ ಹಾಗೂ ಲಿಂ. ಕೆ.ಜಿ. ಲೋಕೇಶ್ವರಪ್ಪ ಅವರ ದತ್ತಿ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಪಾಲಿಸದ ಮಕ್ಕಳು, ಸಂಸ್ಕೃತಿ-ಸಂಸ್ಕಾರಗಳಿಂದ ವಂಚಿತರಾಗುತ್ತಿದ್ದರಿಂದ ತಂದೆ-ತಾಯಿಗಳು ವೃದ್ಧಾಶ್ರಮದ ಪಾಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯನ್ನು ಕಡೆಗಣಿಸಿ, ಭಾರತೀಯ ಸಂಸ್ಕೃತಿ-ಸಂಸ್ಕಾರ ಸೇರಿದಂತೆ ಜೀವನಕ್ಕೆ ಬೇಕಾದ ಉತ್ತಮ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

`ನನ್ನ ಕುಟುಂಬದ ಹಿರಿಯರಿಂದ ಜೀವನಕ್ಕೆ ಬೇಕಾದ ಸಾಕಷ್ಟು ಕೌಶಲ್ಯಗಳನ್ನು ಕಲಿತಿದ್ದೇನೆ ಮತ್ತು ಕುಟುಂಬದ ಒಗ್ಗಟ್ಟು ಹೇಗಿರಬೇಕು ಎಂಬುದನ್ನು ನನ್ನ ತಂದೆ, ಚಿಕ್ಕಪ್ಪ ಹಾಗೂ ದೊಡ್ಡಪ್ಪನವರಿಂದ ಕಲಿತಿದ್ದೇನೆ’ ಎಂದು ತಿಳಿಸಿದರು.

ಕಕ್ಕರಗೊಳ್ಳದಲ್ಲಿ ಗೌಡ್ರು ಕುಟುಂಬ ಊರಿನ ಜನರ ಸಮಸ್ಯೆಗಳನ್ನು ಪರಿಹರಿಸಿ, ನ್ಯಾಯ ಒದಗಿಸುವ ಮೂಲಕ ಪಂಚಾಯ್ತಿ ಮಾಡುತ್ತಿದ್ದ ತಮ್ಮ ಹಿರಿಯರನ್ನು ಸ್ಮರಿಸಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ದತ್ತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

`ಸಾಂಸ್ಕೃತಿಕ ನಾಯಕ ಬಸವಣ್ಣನವರು ಮತ್ತು ಜೀವನ ಮೌಲ್ಯಗಳು’ ಎಂಬ ವಿಷಯ ಕುರಿತು ವಿಶ್ರಾಂತ ಪ್ರಾಚಾರ್ಯ ಲೋಕೇಶ್‌ ಒಡೆಯರ್‌ ವಿಶೇಷ ಉಪನ್ಯಾಸ ನೀಡಿದರು. ದತ್ತಿ ದಾನಿಗಳಾದ ಗಿರಿಜಮ್ಮ ಪರಮೇಶ್ವರಪ್ಪ ಹಾಗೂ ಕುಸುಮಾ ಲೋಕೇಶ್ವರಪ್ಪ ಅವರಿಗೆ ಇದೇ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಜಿ. ಬಸವನಗೌಡ್ರು, ದವನ ಕಾಲೇಜಿನ ಬಾತಿ ಬಸವರಾಜ್‌, ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಬಿ.ಟಿ ಪ್ರಕಾಶ್‌, ಹೆಚ್‌.ಕೆ ಲಿಂಗರಾಜು, ಕೆ.ಜಿ. ವೀರಬಸಪ್ಪ, ವೀರೇಶ್‌ ಮತ್ತಿತರರಿದ್ದರು.

error: Content is protected !!